ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ಜಲಸಂಚಯ ಜನಭಾಗಿದಾರಿ 1.0 ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ರಾಷ್ಟ್ರ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ₹25 ಲಕ್ಷ ನಗದು ಬಹುಮಾನ ಪಡೆದಿದೆ. ಇದರ ಎಲ್ಲ ಶ್ರೇಯ ಗ್ರಾಮ ಪಂಚಾಯಿತಿ ಹಂತದಲ್ಲಿ ಸಿಬ್ಬಂದಿಗೆ ಸಲ್ಲುತ್ತದೆ.

ಗದಗ: ಜಲಸಂಚಯ ಜನಭಾಗಿದಾರಿ 1.0 ಕಾರ್ಯಕ್ರಮದ ಮೂಲಕ ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಮನ್ನಣೆ ಸಿಗುವಂತೆ ಮಾಡಿದ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಶ್ರಮ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನೆ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ಜಲಸಂಚಯ ಜನಭಾಗಿದಾರಿ 1.0 ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ರಾಷ್ಟ್ರ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ₹25 ಲಕ್ಷ ನಗದು ಬಹುಮಾನ ಪಡೆದಿದೆ. ಇದರ ಎಲ್ಲ ಶ್ರೇಯ ಗ್ರಾಮ ಪಂಚಾಯಿತಿ ಹಂತದಲ್ಲಿ ಸಿಬ್ಬಂದಿಗೆ ಸಲ್ಲುತ್ತದೆ ಎಂದರು.

2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹಾಗೂ ಇತರ ಯೋಜನೆಗಳಡಿ ಜಿಲ್ಲೆಯ ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಮಳೆ ನೀರಿನ ಸಂರಕ್ಷಣೆಗೆ 11,971 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಬೃಹತ್ ಜಲಸಂರಕ್ಷಣೆ ಕಾರ್ಯ ರಾಷ್ಟ್ರದ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಜಲಸಂಚಯ ಜನಭಾಗಿದಾರಿ ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಕೇಂದ್ರ ನೋಡಲ್ ಅಧಿಕಾರಿಗಳು 2025ರ ಜೂನ್ 16ರಿಂದ 21ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿ, ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿರುವುದು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. 465 ಮಳೆ ನೀರು ಕೊಯ್ಲು, 75 ಬೋರ್‌ವೆಲ್ ರಿಚಾರ್ಜ್, 10 ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದರು.

ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಹಂತದ ಸಿಬ್ಬಂದಿಯ ಶ್ರಮ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸುವಂತೆ ಮಾಡಿದೆ ಎಂದರು.

ಪ್ರಶಸ್ತಿ ದೊರಕುವಲ್ಲಿ ಶ್ರಮ ವಹಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಯೋಜನಾಧಿಕಾರಿ ಎಂ.ವಿ. ಚಳಗೇರಿ ಇದ್ದರು.