ಮಾನವನ ಬದುಕಿಗೆ ನಿಸರ್ಗ ಮಾತೆ ಅತ್ಯಮೂಲ್ಯ ಕೊಡುಗೆ ನೀಡಿದ್ದು ಮನುಷ್ಯ ತನ್ನ ದುರಾಸೆಯಿಂದ ಸ್ವಾರ್ಥಕ್ಕೆ ಪರಿಸರವನ್ನು ನಾಶ ಮಾಡುವ ಮೂಲಕ ನಿಸರ್ಗದ ಅಸಮತೋಲನಕ್ಕೆ ಕಾರಣಿಭೂತನಾಗಿರುವುದು ವಿಷಾದನೀಯ ಸಂಗತಿ ಎಂದು ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.
ರಾಣಿಬೆನ್ನೂರು: ಮಾನವನ ಬದುಕಿಗೆ ನಿಸರ್ಗ ಮಾತೆ ಅತ್ಯಮೂಲ್ಯ ಕೊಡುಗೆ ನೀಡಿದ್ದು ಮನುಷ್ಯ ತನ್ನ ದುರಾಸೆಯಿಂದ ಸ್ವಾರ್ಥಕ್ಕೆ ಪರಿಸರವನ್ನು ನಾಶ ಮಾಡುವ ಮೂಲಕ ನಿಸರ್ಗದ ಅಸಮತೋಲನಕ್ಕೆ ಕಾರಣಿಭೂತನಾಗಿರುವುದು ವಿಷಾದನೀಯ ಸಂಗತಿ ಎಂದು ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.
ನಗರದ ಸಂಗಮ್ ಸರ್ಕಲ್ ಬಳಿ ಸೋಮವಾರ ರೋಟರಿ, ಇನ್ನರವ್ಹೀಲ್ ಮತ್ತು ಇಂಟರ್ಯಾಕ್ಟ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಲ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಕೃತಿ ಮಾತೆಯು ಗಾಳಿ, ಬೆಳಕು, ಅತ್ಯಮೂಲ್ಯವಾದ ನೀರನ್ನು ದೈವದತ್ತವಾಗಿ ನೀಡಿರುವುದನ್ನು ನಾವು ಸದ್ಭಳಕೆ ಮಾಡಿಕೊಂಡು ಪರಿಸರ ರಕ್ಷಣೆಗೆ ಮುಂದಾಗಬೇಕು. ನೀರನ್ನು ಮಿತವ್ಯಯವಾಗಿ ಬಳಕೆ ಮಾಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಮತ್ತು ಅನಿವಾರ್ಯವಾಗಿದೆ ಎಂದರು.ರೋಟರಿ ಕ್ಲಬ್ ಅದ್ಯಕ್ಷ ಡಾ. ಪ್ರವೀಣ ಖನ್ನೂರ ಮಾತನಾಡಿ, ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಜಗತ್ತಿನಲ್ಲಿ ಶೇ.71ರಷ್ಟು ಭಾಗ ನೀರಿನಿಂದ ಆವೃತವಾದರೂ ಬಳಕೆ ಮಾತ್ರ ಅಲ್ಪ ಪ್ರಮಾಣ. ಇಷ್ಟಿದ್ದರೂ ನಾವು ನೀರಿನ ಬಳಕೆ ಬಗ್ಗೆ ಜಾಗೃತರಾಗದೇ ಹೋದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ಮಳೆ ಕೊಯ್ಲು, ಇಂಗು ಗುಂಡಿ ನಿರ್ಮಾಣದಂತಹ ಕಾರ್ಯಕ್ಕೆ ಮುಂದಾಗಬೇಕು. ನಿತ್ಯದ ಬದುಕಿನಲ್ಲಿ ನೀರನ್ನು ಮಿತವ್ಯಯ ಬಳಕೆ ಮಾಡುವ ಮೂಲಕ ಸಾರ್ವಜನಿಕವಾಗಿ ನೀರಿನ ಸಂರಕ್ಷಣೆ ಬಗ್ಗೆ ಬೃಹತ್ ಜಾಗೃತಿ ಆಂದೋಲನಗಳು ನಡೆಯಬೇಕು ಎಂದರು.
ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ಡಾ. ಎಮ್. ಎಮ್. ಅನಂತರಡ್ಡಿ ಕೆ.ವಿ. ಶ್ರೀನಿವಾಸ, ಖನ್ನೂರ ಸಂಸ್ಥೆ ಪ್ರಾ. ಜಯಶ್ರೀ ಗುಜ್ಜೇರ, ಉಮೇಶ ಹೊನ್ನಾಳಿ, ಗಣೇಶ ಜಾಡಮಲಿ, ಪ್ರಕಾಶ ಮಾಳಗಿ, ಶಿವಯೋಗಿ ಅಂಗಡಿ, ಸುಮಿತ್ ಜಂಬಗಿ, ಖನ್ನೂರ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.