ಕಾಳಿನದಿ ಪಕ್ಕದಲ್ಲೇ ಹರಿದರೂ ಹಳಿಯಾಳಕ್ಕೆ ತಪ್ಪದ ನೀರಿನ ಬವಣೆ

| Published : Mar 27 2025, 01:06 AM IST

ಸಾರಾಂಶ

ಸದ್ಯ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೀವಜಲ ಕ್ಷಾಮದ ಸಮಸ್ಯೆ ಉದ್ಭವಿಸಿದೆ.

ಓರ್ವೆಲ್ ಫರ್ನಾಂಡೀಸ್

ಹಳಿಯಾಳ: ಕಾಳಿ ನದಿಯಿಂದ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಗ್ರಾಮಾಂತರ ಭಾಗವು ಬೇಸಿಗೆಯಲ್ಲಿ ಪುನಃ ನೀರಿನ ಬವಣೆ ಎದುರಿಸುವಂತಾಗಿದೆ.

ಸದ್ಯ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೀವಜಲ ಕ್ಷಾಮದ ಸಮಸ್ಯೆ ಉದ್ಭವಿಸಿದೆ. ಬಿ.ಕೆ.ಹಳ್ಳಿ, ಚಿಬ್ಬಲಗೇರಿ, ಜೋಗನಕೊಪ್ಪ, ಗೋಲೆಹಳ್ಳಿ, ರಾಯಪಟ್ಟಣ ಗೌಳಿವಾಡ, ತಟ್ಟಿಹಳ್ಳ, ಅರ್ಲವಾಡ, ಹೋಮನಳ್ಳಿ, ಬುಕಿನಕೊಪ್ಪ, ಅಜಮನಾಳ ತಾಂಡಾ, ನಾಗಶೆಟ್ಟಿಕೊಪ್ಪ, ಜತಗಾ ಹೊಸುರ, ಅಡಕೆಹೊಸುರ ಗೌಳಿವಾಡ, ತಟ್ಟಿಗೇರಾ, ಕೆಸರೊಳ್ಳಿಯ ಸಿದ್ದಾಪುರ ಗ್ರಾಮಗಳಲ್ಲಿ ನೀರಿನ ತುಟಾಗ್ರತೆ ಎದುರಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ತಲೆದೂರಿರುವ ಜಲಸಮಸ್ಯೆಯನ್ನು ತಾತ್ಕಾಲಿಕವಾಗಿ ನೀಗಿಸಲು ಜಲಮೂಲ ಸಾಮರ್ಥ್ಯ ಹೆಚ್ಚಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಪಟ್ಟಣಕ್ಕೂ ನೀರಿನ ತತ್ವಾರ:

ಪಟ್ಟಣಕ್ಕೆ ಕಾಳಿನದಿಯಿಂದ ನೀರು ಪೂರೈಸಲು ₹23 ಕೋಟಿ ವೆಚ್ಚದ ನಿರಂತರ ನೀರು ಯೋಜನೆಯು ವಿಫಲವಾದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಈ ಬಾರಿ ಜಲಕ್ಷಾಮ ಎರಗಿದೆ. ಹಳಿಯಾಳ ಪುರಸಭೆ ಕಳೆದ ವಿಧಾನಸಭಾ ಚುನಾವಣೆಯ ನಂತರ ದಿನ ಬಿಟ್ಟು ದಿನಕ್ಕೊಮ್ಮೆ ನೀರು ಪೂರೈಸಲು ಹರಸಾಹಸ ಪಡುತ್ತಿದೆ. ಪಟ್ಟಣದಲ್ಲಿನ ಕೆಳಮಟ್ಟದ ಪ್ರದೇಶ, ಇಳಿಜಾರಿನಲ್ಲಿರುವ ಓಣಿ, ಬಡಾವಣೆಗಳಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಮೇಲ್ಭಾಗದಲ್ಲಿರುವ ಬಡಾವಣೆಗಳ ಮನೆಗಳ ನಲ್ಲಿಗಳಿಗೆ ನೀರು ತಲುಪುತ್ತಿಲ್ಲ. ಈ ಭಾಗಗಳಲ್ಲಿ ಮಧ್ಯರಾತ್ರಿಯಾದ ನಂತರ ನೀರಿನ ಹರಿವು ಆರಂಭಗೊಳ್ಳುತ್ತದೆ. ಈ ಭಾಗದ ನಿವಾಸಿಗಳು ನೀರು ತುಂಬಲು ರಾತ್ರಿ ಪೂರ್ತಿ ಜಾಗರಣೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.

2018ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳಿಯಾಳ ಪಟ್ಟಣಕ್ಕೆ ಕಾಳಿನದಿಯಿಂದ ನಿರಂತರ ನೀರು ಪೂರೈಸುವ ₹23 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ್ದರು. ಜತೆಗೆ ₹120 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ದುರದೃಷ್ಟವಶಾತ್ ಬಹುಗ್ರಾಮ ಯೋಜನೆ ಎಂಟು ವರ್ಷಗಳಾದರೂ ಇನ್ನೂ ಮುಕ್ತಾಯಗೊಂಡಿಲ್ಲ. ಇನ್ನೊಂದೆಡೆ ಪಟ್ಟಣಕ್ಕೆ ನೀರು ಪೂರೈಸುವ ನಿರಂತರ ನೀರು ಯೋಜನೆಯು ಆರಂಭಗೊಂಡ ಮೂರು ವರ್ಷದಲ್ಲಿಯೇ ವಿಫಲವಾಯಿತು.

ಅದಕ್ಕಾಗಿ ಶಾಸಕ ಆರ್.ವಿ. ದೇಶಪಾಂಡೆ ವಿಶೇಷ ಕಾಳಜಿಯಿಂದ ಅಮೃತ- 2 ಯೋಜನೆಯಲ್ಲಿ ಹಳಿಯಾಳ ಪಟ್ಟಣದ ನೀರಿನ ಸಮಸ್ಯೆಯನ್ನು ನೀಗಿಸಲು ₹60 ಕೋಟಿ ಮಂಜೂರು ಮಾಡಿಸಿದ್ದು, ಈ ಕಾಮಗಾರಿ ಆರಂಭಗೊಂಡಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಅಮೃತ್ 2 ಈ ಎರಡೂ ನೀರಿನ ಯೋಜನೆಗಳು ಕಾರ್ಯಾರಂಭಿಸುವರೆಗೂ ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗಗಳಿಗೆ ಮತ್ತು ಪಟ್ಟಣಕ್ಕೆ ಜೀವಜಲ ಸಮಸ್ಯೆ ತಪ್ಪಿದ್ದಲ್ಲ.

ಜೀವಜಲದ ಸಮಸ್ಯೆಗೊಳಗಾಗಿರುವ ಮತ್ತು ತುತ್ತಾಗಲಿರುವ ಗ್ರಾಪಂಗಳನ್ನು ಗುರುತಿಸಿ ಪಿಡಿಒಗಳ ಸಭೆ ನಡೆಸಿ ಕಾರ್ಯ ಯೋಜನೆ ರೂಪಿಸುತ್ತಿದ್ದೇವೆ. ಬಹುಗ್ರಾಮ ಯೋಜನೆಯ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಎಪ್ರಿಲ್ ಮೊದಲ ವಾರದಲ್ಲಿ 71 ಗ್ರಾಮಗಳಿಗೆ ಟ್ರೈಯಲ್ ಹಂತದಲ್ಲಿ ಕುಡಿಯುವ ನೀರನ್ನು ಪೂರೈಸಲು ಸಕಲ ಸಿದ್ಧತೆ ನಡೆಸಿದ್ದೇವೆ ಎನ್ನುತ್ತಾರೆ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಸತೀಶ ಆರ್.