ಕೆಎಚ್‍ಬಿ ಕಾಲೋನಿಗೆ ನೀರು ಸ್ಥಗಿತ: ನಿವಾಸಿಗಳ ಆಕ್ರೋಶ

| Published : Dec 10 2024, 12:30 AM IST

ಕೆಎಚ್‍ಬಿ ಕಾಲೋನಿಗೆ ನೀರು ಸ್ಥಗಿತ: ನಿವಾಸಿಗಳ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

Water cut to KHB Colony: Residents' outrage

-ಹರಿಹರದ ಕೆಎಚ್‌ಬಿ ಕಾಲೋನಿಯಲ್ಲಿ ವಾರದಿಂದ ನೀರು ಸರಬರಾಜು ಸ್ಥಗಿತ

----

ಕನ್ನಡಪ್ರಭವಾರ್ತೆ ಹರಿಹರ

ಕೆಎಚ್‍ಬಿ ಕಾಲೋನಿ ನಿವಾಸಿಗಳ ಮನೆಗಳಿಗೆ ಕಳೆದ ಒಂದು ವಾರದಿಂದ ನೀರು ಸರಬರಾಜು ಆಗುತ್ತಿಲ್ಲ ಎಂದು ವಾರ್ಡ್ ಸದಸ್ಯ ದಿನೇಶ್ ಬಾಬು ನೇತೃತ್ವದಲ್ಲಿ ನಗರಸಭೆಗೆ ತೆರಳಿ ಕೆಎಚ್‍ಬಿ ಕಾಲೋನಿಗೆ ನೀರು ಸ್ಥಗಿತಗೊಂಡದ್ದರಿಂದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ ಜಲಸಿರಿ 24*7 ಯೋಜನೆಯಡಿ ನೀರಿನ ಕಂದಾಯ ಕಟ್ಟಿಸಿಕೊಳ್ಳುವ ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತ ಪಡಿಸಿದಾಗ ಅಲ್ಲಿನ ಸಿಬ್ಬಂದಿ ಇಲ್ಲಿ ಕಂದಾಯ ಮಾತ್ರ ಕಟ್ಟಿಸಿಕೊಳ್ಳುವುದು. ನೀರು ಬರದಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್ ಅವರನ್ನು ಸಂಪರ್ಕಿಸಲು ಹೇಳಿದಾಗ ಆಕ್ರೋಶ ವ್ಯಕ್ತ ಪಡಿಸಿದ ಕೆಎಚ್‍ಬಿ ನಿವಾಸಿಗಳು ಇಂಜಿನಿಯರ್ ಬರುವವರೆಗೆ ಕರ ವಸೂಲಿ ಕೇಂದ್ರ ಬಂದ್ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟಿಸಲು ಮುಂದಾದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಲಸಿರಿ ಮುಖ್ಯ ಇಂಜಿನಿಯರ್, ಹಾಗೂ ಕೆಎಚ್‍ಬಿ ನಿವಾಸಿಗಳನ್ನು ನಗರಸಭಾ ಉಪಾಧ್ಯಕ್ಷ ಎಂ ಜಂಬಣ್ಣ ಕೊಠಡಿಗೆ ಕರೆಸಿ ಸಮಸ್ಯೆ ಆಲಿಸಿದರು.

ಈ ವೇಳೆ ಮಾತನಾಡಿದ ನಿವಾಸಿಗಳು ಕಳೆದೊಂದು ವಾರದಿಂದ ಕೆಎಚ್‍ಬಿ ಕಾಲೋನಿಗೆ ಕುಡಿಯುವ ನೀರು ಬರುತ್ತಿಲ್ಲ. ಈಗಾಗಲೆ ಜಲಸಿರಿ ಯೋಜನೆಯ ಪೈಪ್ ಅಳವಡಿಸಲಾಗಿದೆ. ಆದರೆ ಇದುವರೆಗೆ ನಳದ ಸಂಪರ್ಕ ನೀಡಿಲ್ಲ. ಹಾಗೂ ಮೀಟರ್ ಅಳವಡಿಸಿಲ್ಲ ಈ ಹಿಂದೆ ಅಳವಡಿಸಲಾಗಿದ್ದ ಹಳೆ ಪೈಪ್‍ನಲ್ಲಿ ನೀರು ಬಿಡುತ್ತಿದ್ದಾರೆ. ಅದೂ ಈಗ ಸ್ಥಗಿತವಾಗಿದೆ ಎಂದು ದೂರಿದರು.

ಸದಸ್ಯ ದಿನೇಶ್ ಬಾಬು ಮಾತನಾಡಿ, ನಗರದ ಬಹುತೇಕ ಎಲ್ಲಾ ವಾರ್ಡಗಳಿಗೆ ಜಲಸಿರಿಯಿಂದ ನೀರು ಸರಬರಾಜು ಆಗುತ್ತದೆ. ಆದರೆ, ನಮ್ಮ ವಾರ್ಡ್‍ನಲ್ಲಿ ಮಾತ್ರ ವಾರದಿಂದ ಸರಿಯಾಗಿ ನೀರು ಬರುತ್ತಿಲ್ಲ, ವಾರ್ಡ್‌ ಗೆ ಹೋದರೆ ಜನರು ಆರೋಪದ ಸುರಿಮಳೆಗೈಯುತ್ತಿದ್ದಾರೆ. ನಗರ ಸಭೆಗೆ ಸರಿಯಾದ ಸಮಯದಲ್ಲಿ ತೆರಿಗೆ ಕಟ್ಟುವಂತ ಜನರಿಗೆ ನೀರು ಕೊಡಲು ನಗರಸಭೆಯಿಂದ ಆಗುತ್ತಿಲ್ಲ ಎಂದು ಕಿಡಿ ಕಾರಿದರು.

ಉಪಾಧ್ಯಕ್ಷ ಎಂ ಜಂಬಣ್ಣ ಮಾತನಾಡಿ, ಕಳೆದೊಂದು ವಾರದಿಂದ ನೀರು ಬಾರದಿದ್ದರೆ ಜನರು ಹೇಗೆ ಸಂಭಾಳಿಸಬೇಕು ಎಂದು ಇಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಒಂದು ಗಂಟೆ ಒಳಗೆ ಆ ಭಾಗದ ಜನರಿಗೆ ನೀರು ಒದಗಿಸಬೇಕು ತಪ್ಪಿದಲ್ಲಿ ತಮ್ಮ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು, ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ವಾರ್ಡ್‌ ಜನರು ನಲ್ಲಿ ಅಳವಡಿಸುವಂತೆ ನಗರಸಭೆಗೆ ಹಣ ಕಟ್ಟಿ, ಲೈಸೆನ್ಸ್ ಪಡೆದು ಪರದಾಡಬೇಕಾಗಿದೆ. ನಳದ ಸಲಕರಣೆಗಳಿಲ್ಲ ಎಂದು ಸಬೂಬ್ ಹೇಳುತ್ತಿದ್ದೀರಿ, ತಕ್ಷಣ ನಳ ಅಳವಡಿಸುವ ಸಲಕರಣೆ ತರಿಸಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು.

ಜಲಸಿರಿ ಇಂಜಿನಿಯರ್ ನಳಿನ್ ಕುಮಾರ್ ಮಾತನಾಡಿ, ನದಿಯಿಂದ ನೀರೆತ್ತುವ ಪಂಪ್ ಒಂದೆ ಇದೆ. ಅಲ್ಲದೆ ವಿದ್ಯುತ್ ಸರಬರಾಜಿನ ಸಮಸ್ಯೆ ಇದೆ. ಹೆಚ್ಚುವರಿ ವಿದ್ಯುತ್ ನೀಡಲು ಈಗಾಗಲೇ ರಾಣೆಬೆನ್ನೂರು ವಿದ್ಯುತ್ ಇಲಾಖೆಗೆ ಮನವಿ ಮಾಡಲಾಗಿದೆ. ಸಂಬಂಧಿಸಿದ ಇಂಜಿನಿಯರ್ ಸರ್ವೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಳವಡಿಸಲಿದ್ದಾರೆ ಎಂದರು.-----

09 ಎಚ್‍ಆರ್‍ಆರ್ 03

ಹರಿಹರದ ಕೆಎಚ್‌ಬಿ ಕಾಲೋನಿಯಲ್ಲಿ ಕಳೆದೊಂದು ವಾರದಿಂದ ನೀರು ಸರಬರಾಜು ಸ್ಥಗಿತವಾಗಿದೆ ಎಂದು ಸ್ಥಳೀಯ ನಿವಾಸಿಗಳು ನಗರಸಭೆಗೆ ತೆರಳಿ ಆಕ್ರೋಶ ವ್ಯಕ್ತ ಪಡಿಸಿದರು.