ಬಹುಗ್ರಾಮ ಕುಡಿವ ನೀರಿನ ಯೋಜನೆಗೂ ನೀರಿನ ಬರ

| Published : May 13 2024, 12:01 AM IST

ಸಾರಾಂಶ

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ನಿತ್ಯ 50 ಲಕ್ಷ ಲೀಟರ್‌ಗೂ ಅಧಿಕ ನೀರು ಬಳಕೆಯಾಗುತ್ತಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಸಕಾಲದಲ್ಲಿ ಮಳೆ ಇಲ್ಲದೇ ತುಂಗಭದ್ರೆ ಬಹುತೇಕ ಬತ್ತಿ ಹೋಗಿದೆ. ನದಿ ತೀರದಲ್ಲಿರುವ ಪಟ್ಟಣ ಸೇರಿದಂತೆ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೂ ನೀರು ಇಲ್ಲದ ಸ್ಥಿತಿ ಎದುರಾಗಿದೆ.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ನಿತ್ಯ 50 ಲಕ್ಷ ಲೀಟರ್‌ಗೂ ಅಧಿಕ ನೀರು ಬಳಕೆಯಾಗುತ್ತಿದೆ. ಆದರೆ ನದಿ ಖಾಲಿಯಾಗಿದ್ದರಿಂದ ನೀರು ಪೂರೈಕೆ ಆಗುತ್ತಿಲ್ಲ. ಮೊದಲು ಪಟ್ಟಣಕ್ಕೆ ಪೂರೈಕೆ ಮಾಡುತ್ತಿದ್ದ ಕೊಟ್ನಿಕಲ್ಲು ಬಳಿಯ ಜಾಕ್‌ವೆಲ್‌ನಲ್ಲಿ ನೀರಿಲ್ಲ. ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ ನಿರ್ಮಿಸಿರುವ, 2ನೇ ಹಂತದ ಕುಡಿವ ನೀರಿನ ಯೋಜನೆಯ ಜಾಕ್‌ವಾಲ್‌ ಬಳಿ ಅಲ್ಪಸ್ವಲ್ಪ ನೀರಿದೆ. ಜಾಕ್‌ವಾಲ್‌ಗೆ ನೀರು ಒದಗಿಸಲು ಪುರಸಭೆ ಹೊಸದಾಗಿ ಮೋಟರ್‌, ಪೈಪ್‌ ಖರೀದಿ ಮಾಡಬೇಕಿದೆ.

ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ ಹೂವಿನಹಡಗಲಿ 2ನೇ ಹಂತದ ಕುಡಿವ ನೀರಿನ ಯೋಜನೆ ಜಾಕ್‌ವಾಲ್‌ ಎದುರಿಗೆ, ಗದಗ ಜಿಲ್ಲೆಯ 153 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಯೋಜನೆಯ ಜಾಕ್‌ವಾಲ್‌ ಇದೆ. ಈಗಾಗಲೇ ಅಲ್ಲಿಯೂ ಜಾಕ್‌ವಾಲ್‌ಗೆ ನೀರಿಲ್ಲದ ಕಾರಣ ಬ್ಯಾರೇಜ್‌ನ ತಗ್ಗು ಗುಂಡಿಯಲ್ಲಿನ ನೀರನ್ನು ಮೋಟರ್‌ ಮೂಲಕ ಪಂಪ್‌ ಮಾಡಿ ಜಾಕ್‌ವಾಲ್‌ಗೆ ಒದಗಿಸುತ್ತಿದ್ದಾರೆ. ಇದರಿಂದ ನಿತ್ಯ ನೀರು ಖಾಲಿಯಾಗುತ್ತಿದೆ. ಬ್ಯಾರೇಜ್‌ನಲ್ಲಿ ನೀರು ಡೆಡ್‌ ಸ್ಟೋರೇಜ್‌ಗೆ ಬಂದಿದ್ದು, ಇನ್ನು ವಾರ ಇಲ್ಲವೇ 10 ದಿನಗಳಿಗೆ ಆಗುವಷ್ಟು ನೀರು ಮಾತ್ರ ಇದೆ. ಇಂತಹ ಸಂದರ್ಭದಲ್ಲೇ ಪಟ್ಟಣದಲ್ಲಿ ಮೇ 14ರಿಂದ ಮೇ 29ರವರೆಗೂ ಗ್ರಾಮ ದೇವತೆ ಜಾತ್ರೆ ನಡೆಯಲಿದೆ. ಆಗ ನೀರಿನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ.

ಪಟ್ಟಣದ ಕೆಲವೆಡೆ ಕೊಳವೆಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ನದಿ ನೀರಿನ ಬಳಕೆ ಹೆಚ್ಚಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಮನೆಗಳಿಗೆ ಹಾಕಿದ ನಳಗಳಿಗೆ ಟ್ಯಾಪ್‌ ಇಲ್ಲ. ಇದರಿಂದ ಶುದ್ಧ ನೀರು ಚರಂಡಿ ಪಾಲಾಗುತ್ತಿದೆ. ಬೇಸಿಗೆಯಲ್ಲಿ ಹಿತಮಿತವಾಗಿ ನೀರು ಬಳಕೆ ಮಾಡಬೇಕೆಂಬ ಜಾಗೃತಿ ಜನರಲ್ಲಿ ಇಲ್ಲ. ತಮ್ಮ ಮನೆಗಳಿಗೆ ಸಾಕಾಗುವಷ್ಟು ನೀರು ಸಂಗ್ರಹಿಸಿದ ಬಳಿಕ ಟ್ಯಾಪ್‌ ಹಾಕಿ ಬಂದ್‌ ಮಾಡಬೇಕೆಂಬ ಕಾಳಜಿಯೇ ಇಲ್ಲ. ಇದರಿಂದ ಸಹಜವಾಗಿ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ನದಿಯಲ್ಲಿನ ನೀರು ಖಾಲಿಯಾದ ಕೂಡಲೇ ಕೊಳವೆಬಾವಿ ನೀರನ್ನು ಟ್ಯಾಂಕರ್‌ನಲ್ಲಿ ತುಂಬಿಸಿ, ನೀರು ಪೂರೈಕೆಗೆ ಈಗಾಗಲೇ ಪುರಸಭೆಯಲ್ಲಿ ಟೆಂಡರ್‌ ಕರೆದು ಕಾಮಗಾರಿ ಆದೇಶಿಸಲಾಗಿದೆ. ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಇರುವ ಕಾರಣ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ.

ಪಟ್ಟಣದ 2ನೇ ಹಂತದ ಕುಡಿವ ನೀರಿನ ಯೋಜನೆಯ ಜಾಕ್‌ವೆಲ್‌ ಬಳಿ ನೀರಿಲ್ಲ. ಇದರಿಂದ ಹೊಸದಾಗಿ ಮೋಟರ್‌ ಹಾಕಿ ತಗ್ಗು ಗುಂಡಿಯಲ್ಲಿನ ನೀರು ಜಾಕ್‌ವೆಲ್‌ಗೆ ಪಂಪ್‌ ಮಾಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ.

ಮಳೆ ಇಲ್ಲದೇ ಹೊಳೆಯಲ್ಲಿನ ನೀರು ಖಾಲಿಯಾಗಿದೆ. ಬೇಸಿಗೆಯಲ್ಲಿ ಜನ ನೀರನ್ನು ಮಿತ ಬಳಕೆ ಮಾಡಬೇಕಿದೆ. ಮನೆ ಮುಂದಿನ ನಳಕ್ಕೆ ಟ್ಯಾಪ್‌ ಹಾಕಬೇಕಿದೆ. ಶುದ್ಧ ನೀರು ಚರಂಡಿ ಪಾಲಾಗದಂತೆ ಎಚ್ಚರಿಕೆ ವಹಿಸಬೇಕು. ಪುರಸಭೆ ಕ್ರಮವಹಿಸಬೇಕು ಎನ್ನುತ್ತಾರೆ ನಗರ ನಿವಾಸಿಗಳು.