ಐದು ವರ್ಷ ಕಳೆದರೂ ನೀರುಕಾಣದ ಓವರ್‌ ಹೆಡ್‌ ಟ್ಯಾಂಕ್‌

| Published : Oct 27 2023, 12:30 AM IST

ಐದು ವರ್ಷ ಕಳೆದರೂ ನೀರುಕಾಣದ ಓವರ್‌ ಹೆಡ್‌ ಟ್ಯಾಂಕ್‌
Share this Article
  • FB
  • TW
  • Linkdin
  • Email

ಸಾರಾಂಶ

ತಲಾ 5 ಲಕ್ಷ ಲೀಟರ್ ಸಾಮರ್ಥ್ಯದ 4 ಓವರ್ ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗಿ, ಜನತೆಗೆ ಸಮರ್ಪಕ ನೀರು ಸಿಗುವ ವಿಶ್ವಾಸ ಮೂಡಿತ್ತು. ಆದರೆ ಈ ನಡುವೆ ಟ್ಯಾಂಕ್‌ಗಳಿಂದ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯದೇ ವರ್ಷಗಳು ಕಳೆದಿದ್ದವು.

ಶಿರಸಿ:

ಬೇಸಿಗೆ ಬಂದಂತೆ ನಗರದಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಆದರೆ, ನಗರದ ಜನತೆಯ ಕುಡಿಯುವ ನೀರು ಪೂರೈಕೆಗೆ ಪೂರಕವಾಗಿ ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ಮೇಲ್ಮಟ್ಟದ ಜಲ ಸಂಗ್ರಹಾಗಾರ (ಓವರ್ ಹೆಡ್ ಟ್ಯಾಂಕ್‌)ಗಳು ಆರೇಳು ವರ್ಷಗಳಿಂದ ಬಳಕೆಯಾಗದೇ ಧೂಳು ತಿನ್ನುತ್ತಿವೆ.ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ ಹಾಗೂ ನಗರಸಭೆ ನಿಧಿಯ ₹ 4 ಕೋಟಿ ಅನುದಾನ ಬಿಡುಗಡೆ ಆಗಿತ್ತು. 2014ರಲ್ಲಿ ಕಾಮಗಾರಿ ಆರಂಭವಾಗಿ 2017ರಲ್ಲಿ ಪೂರ್ಣಗೊಂಡಿತ್ತು. 40 ಸಾವಿರ ಜನರಿಗೆ ಅನುಕೂಲ ಆಗುವಂತೆ ನಗರದ ರಾಘವೇಂದ್ರ ಮಠ ಸರ್ಕಲ್, ಬನವಾಸಿ ರಸ್ತೆ ನೆಜ್ಜೂರು ಪ್ಲಾಟ್, ನೆಹರು ನಗರ, ಕಸ್ತೂರಬಾ ನಗರ ಭಾಗದಲ್ಲಿ ತಲಾ 5 ಲಕ್ಷ ಲೀಟರ್ ಸಾಮರ್ಥ್ಯದ 4 ಓವರ್ ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗಿ, ಜನತೆಗೆ ಸಮರ್ಪಕ ನೀರು ಸಿಗುವ ವಿಶ್ವಾಸ ಮೂಡಿತ್ತು. ಆದರೆ ಈ ನಡುವೆ ಟ್ಯಾಂಕ್‌ಗಳಿಂದ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯದೇ ವರ್ಷಗಳು ಕಳೆದಿದ್ದವು. ಇದರಿಂದ ಟ್ಯಾಂಕ್‌ಗಳು ಒಣಗಿ ನಿಲ್ಲುವ ಜತೆ ಸಾರ್ವಜನಿಕರಿಗೂ ನೀರಿಗೆ ಸಮಸ್ಯೆ ಉಂಟಾಗುತ್ತಿತ್ತು. ‘ಈಗ ಪೈಪ್‌ಲೈನ್ ಕಾಮಗಾರಿ ಮುಗಿದು ವರ್ಷ ಕಳೆದಿದೆ. ಆದರೂ ಇನ್ನೂ ನೀರು ಬಿಡುವ ಕೆಲಸವಾಗಿಲ್ಲ’ ಎಂಬುದು ಸಾರ್ವಜನಿಕರ ಆರೋಪ.

ಓವರ್ ಹೆಡ್ ಟ್ಯಾಂಕ್‌ನಿಂದ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್‌ಗೆ ಪೈಪ್ ಸಂಪರ್ಕ ನೀಡಲು ₹ 36 ಲಕ್ಷ ಗುತ್ತಿಗೆ ಕರೆಯಲಾಗಿದೆ. ಸ್ಥಳೀಯ ಗುತ್ತಿಗೆದಾರರೊಬ್ಬರು ಗುತ್ತಿಗೆ ಪಡೆದು 5 ವರ್ಷಗಳು ಕಳೆದ ಮೇಲೆ ಕಳೆದ ವರ್ಷ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೂ ಈ ವರೆಗೆ ನಗರಾಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಟ್ಯಾಂಕ್‌ಗಳು ನೀರು ಕಂಡಿಲ್ಲ ಎಂಬುದು ನಗರದ ನಿವಾಸಿ ಸುರೇಶ ನಾಯ್ಕ ದೂರಾಗಿದೆ.ನಗರಸಭೆ ವತಿಯಿಂದ ನೀರು ನೀಡಲಾಗುತ್ತಿದ್ದರೂ ನೆಹರು ನಗರ, ಕಸ್ತೂರಬಾ ನಗರ, ರಾಮನಬೈಲ್, ರಾಘವೇಂದ್ರ ಮಠ ಹಿಂಭಾಗದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಘಟ್ಟ ಪ್ರದೇಶಕ್ಕೆ ಸರಿಯಾಗಿ ನೀರು ಬರುತ್ತಿಲ್ಲ. ಮೂರು ನಾಲ್ಕು ಗಂಟೆ ಕಾದು ನೀರು ಸಂಗ್ರಹಿಸುವ ಕೆಲಸ ಆಗುತ್ತಿದೆ. ಇದು ತಪ್ಪಲು ಓವರ್ ಹೆಡ್ ಟ್ಯಾಂಕ್‌ಗಳಿಂದ ನೀರು ಪೂರೈಕೆಗೆ ಚಾಲನೆ ನೀಡಬೇಕು’ ಎನ್ನುತ್ತಾರೆ ಅವರು.

ಈಗಾಗಲೇ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ತಕ್ಷಣ ನಗರಸಭೆ ಅಧಿಕಾರಿಗಳು ಪರೀಕ್ಷಿಸಿ ಟ್ಯಾಂಕ್‌ಗಳಿಗೆ ನೀರು ತುಂಬುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ನಗರಸಭೆ ಸದಸ್ಯ ಮಧುಕರ ಬಿಲ್ಲವ ಹೇಳಿದ್ದಾರೆ.