ಕೊನೆಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುಗಡೆ

| Published : Jul 10 2025, 12:46 AM IST

ಕೊನೆಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಮಂಗಳವಾರ ಮಧ್ಯರಾತ್ರಿಯಿಂದ ನೀರು ಬಿಡುಗಡೆ ಮಾಡಿದೆ. ಜೂನ್‌ನಲ್ಲೇ ಅಣೆಕಟ್ಟು ಭರ್ತಿಯಾಗಿದ್ದರೂ, ನಾಲೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಆದೇಶಿಸಿದ್ದರೂ ನೀರು ಹರಿಸದಿದ್ದರಿಂದ ರೈತ ಸಮುದಾಯ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಮಂಗಳವಾರ ಮಧ್ಯರಾತ್ರಿಯಿಂದ ನೀರು ಬಿಡುಗಡೆ ಮಾಡಿದೆ. ಜೂನ್‌ನಲ್ಲೇ ಅಣೆಕಟ್ಟು ಭರ್ತಿಯಾಗಿದ್ದರೂ, ನಾಲೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಆದೇಶಿಸಿದ್ದರೂ ನೀರು ಹರಿಸದಿದ್ದರಿಂದ ರೈತ ಸಮುದಾಯ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಎಲ್ಲಾ ನಾಲೆಗಳಿಗೂ ೧೫೦೦ ಕ್ಯುಸೆಕ್‌ವರೆಗೆ ನೀರನ್ನು ಹರಿಸಲಾಗುತ್ತಿದೆ. ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ೨೫೦೦ ಕ್ಯುಸೆಕ್‌ವರೆಗೆ ಹೆಚ್ಚಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನೀರು ಬಿಡುಗಡೆಗೆ ರೈತ ಸಮೂಹದಿಂದ ತೀವ್ರ ಒತ್ತಡ ಹೆಚ್ಚಾಗಿದ್ದರಿಂದ ನೀರಾವರಿ ಸಲಹಾ ಸಮಿತಿ ಸಭೆಗೂ ಮುನ್ನವೇ ಅಧಿಕಾರಿಗಳು ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದ್ದಾರೆ. ಎರಡು-ಮೂರು ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸುವ ಕುರಿತಂತೆ ಅಧಿಕೃತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲೆಯ ಬಹುತೇಕ ಭಾಗದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದರಿಂದ ಕಬ್ಬು ಬೆಳೆ ಒಣಗುತ್ತಿದ್ದರಿಂದ ರೈತರು ಬೆಳೆ ನಷ್ಟಕ್ಕೊಳಗಾಗುವ ಆತಂಕದಲ್ಲಿದ್ದರು. ಕೃಷ್ಣರಾಜಸಾಗರಕ್ಕೆ ಸಾಕಷ್ಟು ನೀರು ಹರಿದುಬರುತ್ತಿದ್ದ ಸಮಯದಲ್ಲೂ ನಾಲೆಗಳಿಗೆ ನೀರು ಹರಿಸಲಿಲ್ಲ. ನಾಲಾ ಆಧುನೀಕರಣ ಕಾಮಗಾರಿಯ ನೆಪವೊಡ್ಡಿ ಮುಂದೂಡುತ್ತಲೇ ಬಂದರು. ೩೦೦ ಟಿಎಂಸಿಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋದರೂ ಬೆಳೆಗಳಿಗೆ ನೀರು ಸಿಗದಿದ್ದರಿಂದ ರೈತರು ಚಿಂತೆಗೀಡಾಗಿದ್ದರು. ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾದ ಸಂತಸ ಒಂದೆಡೆಯಾದರೆ, ಬೆಳೆಗಳಿಗೆ ನೀರಿಲ್ಲವೆಂಬ ನೋವು ಒಂದೆಡೆಯಾಗಿತ್ತು.

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಆದೇಶಿಸಿ ಹೋಗಿದ್ದರು. ಆದರೂ, ಗೇಟ್ ದುರಸ್ತಿ ನೆಪವೊಡ್ಡಿ ಸಿಎಂ ಆದೇಶ ಹೊರಡಿಸಿದ ಒಂದು ವಾರದ ಬಳಿಕ ನಾಲೆಗಳಿಗೆ ಅಧಿಕಾರಿಗಳು ನೀರು ಹರಿಸಿದ್ದಾರೆ.

ಕೃಷಿ ಚಟುವಟಿಕೆ ಚುರುಕು:

ನಾಲೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಸಂತಸಗೊಂಡಿರುವ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಭೂಮಿಯನ್ನು ಹದಗೊಳಿಸುವುದಕ್ಕೆ ಮುಂದಾಗುತ್ತಿರುವ ರೈತರು ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರವನ್ನು ಖರೀದಿಸಲು ಮುಂದಾಗಿದ್ದಾರೆ. ಉತ್ತಮ ಮಳೆಯಾಗಿ ಕೆಆರ್‌ಎಸ್ ಭರ್ತಿಯಾಗಿರುವುದರಿಂದ ಕೃಷಿ ಇಲಾಖೆ ಕೂಡ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿದೆ. ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ನಾಲೆಗಳಿಗೆ ಬಿಡುಗಡೆ ಮಾಡಿರುವ ನೀರಿನಿಂದ ಮೊದಲು ಕೆರೆ-ಕಟ್ಟೆಗಳನ್ನು ತುಂಬಿಸಲು ಮೊದಲ ಆದ್ಯತೆ ನೀಡಲಾಗುವುದು. ಈ ನೀರನ್ನು ಒಂದು ವಾರ ಕಾಲ ಹರಿಸಲಾಗುವುದು. ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ನೀರನ್ನು ನಿರಂತರವಾಗಿ ಮುಂದುವರೆಸುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕೊರತೆ ಇದೆ. ಅದಕ್ಕಾಗಿ ಈಗ ೧೫೦೦ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ನೀರಿನಿಂದ ಮೊದಲಿಗೆ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದು. ಜೊತೆಗೆ ಕಬ್ಬು ಬೆಳೆಗಳಿಗೂ ನೀರು ಸಿಗಲಿದೆ. ನೀರಾವರಿ ಸಲಹಾ ಸಮಿತಿ ಸಭೆ ಎರಡು-ಮೂರು ದಿನದಲ್ಲಿ ನಡೆಯಲಿದೆ. ನೀರು ಬಿಡುಗಡೆಯ ತೀರ್ಮಾನ ಹೊರಬೀಳಲಿದ್ದು, ಆನಂತರ ನಿರಂತರವಾಗಿ ನಾಲೆಗಳಲ್ಲಿ ನೀರು ಹರಿಯಲಿದೆ.

- ರಘುರಾಮ್, ಅಧೀಕ್ಷಕ ಅಭಿಯಂತರ, ಕೆಆರ್‌ಎಸ್