ಹತ್ತು ದಿನ ಕಾದು ಬೆಳೆಗಳಿಗೆ ನೀರು: ಕೃಷಿ ಸಚಿವ ಚಲುವರಾಯಸ್ವಾಮಿ

| Published : Jul 15 2024, 01:49 AM IST

ಹತ್ತು ದಿನ ಕಾದು ಬೆಳೆಗಳಿಗೆ ನೀರು: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿಗೆ ನಿತ್ಯ ೧ ಟಿಎಂಸಿ ನೀರು ಹರಿಸುವಂತೆ ನೀರು ನಿರ್ವಹಣಾ ಸಮಿತಿ ಶಿಫಾರಸು ಮಾಡಿರುವುದು ನಮಗೆ ಶಾಕ್ ನೀಡಿದೆ. ಈ ಮೊದಲು ತಮಿಳುನಾಡು ನೀರಿಗೆ ಬೇಡಿಕೆ ಇಟ್ಟ ಸಮಯದಲ್ಲಿ ರಾಜ್ಯದ ನೀರಾವರಿ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದರಿಂದ ನೀರು ಹರಿಸುವುದಕ್ಕೆ ಅನುಮತಿ ನೀಡಿರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮುಂದಿನ ಹತ್ತು ದಿನಗಳವರೆಗೆ ಕಾದುನೋಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಈಗ ಜಲಾಶಯದಲ್ಲಿ ೧೦೪ ಅಡಿಯವರೆಗೆ ನೀರಿದೆ. ಕುಡಿಯುವ ನೀರು, ಕೆರೆ-ಕಟ್ಟೆಗಳನ್ನು ತುಂಬಿಸುವ ಉದ್ದೇಶಕ್ಕೆ ಈ ನೀರು ಹರಿಸಲಾಗುತ್ತಿದೆ. ಜು.೧೫ರ ಬಳಿಕ ಭತ್ತದ ಒಟ್ಟು ಕಾರ್ಯ ಆರಂಭವಾಗಲಿದೆ. ಸದ್ಯ ನೀರಿಗೆ ಕೊರತೆ ಇರುವುದರಿಂದ ಬೆಳೆಗಳಿಗೆ ನೀರು ಹರಿಸುವ ವಿಚಾರವಾಗಿ ಹತ್ತು ದಿನ ಕಾದು ನೋಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಾಧಿಕಾರಕ್ಕೆ ಮೇಲ್ಮನವಿ:

ತಮಿಳುನಾಡಿಗೆ ನಿತ್ಯ ೧ ಟಿಎಂಸಿ ನೀರು ಹರಿಸುವಂತೆ ನೀರು ನಿರ್ವಹಣಾ ಸಮಿತಿ ಶಿಫಾರಸು ಮಾಡಿರುವುದು ನಮಗೆ ಶಾಕ್ ನೀಡಿದೆ. ಈ ಮೊದಲು ತಮಿಳುನಾಡು ನೀರಿಗೆ ಬೇಡಿಕೆ ಇಟ್ಟ ಸಮಯದಲ್ಲಿ ರಾಜ್ಯದ ನೀರಾವರಿ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದರಿಂದ ನೀರು ಹರಿಸುವುದಕ್ಕೆ ಅನುಮತಿ ನೀಡಿರಲಿಲ್ಲ. ಇದೀಗ ತಮಿಳುನಾಡು ಮತ್ತು ಕರ್ನಾಟಕದ ನೀರಾವರಿ ಅಧಿಕಾರಿಗಳು ಚರ್ಚೆ ನಡೆಸಿದ ವೇಳೆಯೂ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರೂ ನೀರು ಬಿಡುಗಡೆ ಆದೇಶ ನೀಡಲಾಗಿದೆ. ಈ ವಿಷಯವಾಗಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವುದಕ್ಕೆ ನಿರ್ಧರಿಸಲಾಗಿದೆ.

ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದು, ಈ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಂಸದರು, ರಾಜ್ಯಸಭಾ ಸದಸ್ಯರು, ಕೇಂದ್ರ ಸಚಿವರನ್ನೂ ಆಹ್ವಾನಿಸಲಾಗಿದೆ. ಅವರೆಲ್ಲರ ಅಭಿಪ್ರಾಯ, ಸಲಹೆ ಸ್ವೀಕರಿಸಲು ನಿರ್ಧರಿಸಲಾಗಿದೆ ಎಂದರು.

ಕಬಿನಿಯಿಂದ ತಮಿಳುನಾಡಿಗೆ ನೀರು:

ಅದೃಷ್ಟವಶಾತ್ ಕೇರಳದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿದೆ. ಆ ಅಣೆಕಟ್ಟೆಯಿಂದ ೧೮ ರಿಂದ ೨೦ ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಗಾಗಿ ತಮಿಳುನಾಡಿನ ಬೇಡಿಕೆಯಷ್ಟು ನೀರು ಅಲ್ಲಿಂದ ಹೋಗುತ್ತಿದೆ. ಹಾರಂಗಿ, ಹೇಮಾವತಿಗೂ ಒಳಹರಿವು ಹೆಚ್ಚಿದೆ. ಆ ಜಲಾಶಯಗಳು ಭರ್ತಿಯಾದರೆ ಕೆಆರ್‌ಎಸ್‌ಗೆ ಹೆಚ್ಚು ನೀರು ಹರಿದುಬರಲಿದೆ. ಅಲ್ಲಿಗೆ ಜುಲೈ ತಿಂಗಳ ನೀರಿನ ಬೇಡಿಕೆ ಪೂರ್ಣವಾಗಲಿದೆ. ಮುಂದೆ ಮಳೆ ಆಶಾದಾಯಕವಾಗಿ ಬರುವ ನಿರೀಕ್ಷೆ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪಿ.ರವಿಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಹಿಳಾಧ್ಯಕ್ಷೆ ಅಂಜನಾ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ರುದ್ರಪ್ಪ ಇತರರಿದ್ದರು.ಕಾವೇರಿ ನೀರಿನ ಸಮಸ್ಯೆ ಬಗೆಹರಿಸ್ತೀನಂತ ನಾನು ಹೇಳಿದ್ನಾ..!

- ಸಂಸದರು, ಕೇಂದ್ರಸಚಿವರಾಗಿ ಈಗ ಜವಾಬ್ದಾರಿ ನಿರ್ವಹಿಸಲಿ

- ನಮಗೂ ಅದಕ್ಕೂ ಸಂಬಂಧವಿಲ್ಲವೆಂದರೆ ನಾವೇನೂ ಕೇಳೋಲ್ಲ

ಲೋಕಸಭೆ ಚುನಾವಣೆ ಸಮಯದಲ್ಲಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ ಎಂದು ನಾನು ಹೇಳಿದ್ದನೇ. ಹೇಳಿರೋರು ಅವರು. ಈಗ ತಮಿಳುನಾಡು ನೀರು ಹರಿಸುವಂತೆ ಶಿಫಾರಸು ಮಾಡಲಾಗಿದೆ. ಸಂಸದರು, ಕೇಂದ್ರ ಸಚಿವರಾಗಿರುವವರು ಕಾವೇರಿ ಕಣಿವೆ ರೈತರ ಹಿತದೃಷ್ಟಿಯಿಂದ ಶಿಫಾರಸನ್ನು ರದ್ದುಪಡಿಸಲಿ ಎಂದು ಎಚ್.ಡಿ. ಕುಮಾರಸ್ವಾಮಿ ಹೆಸರೇಳದೆ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಪಡಿಸಿದರು.

ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿಲ್ಲವೆಂದು ಪುಟ್ಟರಾಜು ಹೇಗೆ ಹೇಳುತ್ತಾರೆ. ಜುಲೈ ಅಂತ್ಯದವರೆಗೆ ನೀರು ಕೊಡಲು ಸಾಧ್ಯವಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೇವೆ. ಪತ್ರಿಕೆ-ಮಾಧ್ಯಮ ಮಿತ್ರರಿಗೂ ತಿಳಿಸಿದ್ದೇವೆ. ರಾಜಕೀಯ ತೀಟೆ ಮಾಡಲು ಏನೇನೋ ಮಾತನಾಡಬಾರದು. ಮಂಡ್ಯದಿಂದ ಸಂಸದರಾಗಿ ಗೆದ್ದುಹೋದವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಪ್ರಧಾನಿ, ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಒತ್ತಾಯಿಸುತ್ತಿದ್ದೇವೆ. ನಮ್ಮಿಂದಾದ ಪ್ರಯತ್ನವನ್ನೂ ನಾವೂ ಮಾಡುತ್ತಿದ್ದೇವೆ. ಒಮ್ಮೆ ನೀರು ಬಿಡುವ ವಿಚಾರಕ್ಕೂ ನಮಗೂ ಸಂಬಂಧವಿಲ್ಲವೆಂದು ಹೇಳಿಬಿಡಲಿ ಅವರನ್ನು ನಾವೇನೂ ಕೇಳುವುದಿಲ್ಲವೆಂದು ಕುಟುಕಿದರು.