ಎರಡನೇ ಬೆಳೆಗೆ ನೀರು, ನಾಳೆ ಮಹತ್ವದ ಸಭೆ

| Published : Nov 04 2025, 12:30 AM IST

ಸಾರಾಂಶ

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಎರಡನೆ ಬೆಳೆಗೆ ನೀರು ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ಚರ್ಚಿಸಲು ನ. 5ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.

ಕೊಪ್ಪಳ: ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಎರಡನೆ ಬೆಳೆಗೆ ನೀರು ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ಚರ್ಚಿಸಲು ನ. 5ರಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ನಿಗದಿ ಮಾಡಲಾಗಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದಿರುವುದರಿಂದ ತಾತ್ಕಾಲಿಕ ಗೇಟ್ ಅಳವಡಿಸಲಾಗಿದ್ದು, ಉಳಿದ ಗೇಟ್ ಗಳು ಶಿಥಿಲಗೊಂಡಿರುವುದರಿಂದ ಅವುಗಳನ್ನು ಹಂತಹಂತವಾಗಿ ಬದಲಾಯಿಸುವ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಸಭೆಯ ಕುರಿತು ಕುತೂಹಲ ಕೆರಳಿದೆ.

ಸದ್ಯ ಜಲಾಶಯದಲ್ಲಿ ಕೇವಲ 80 ಟಿಎಂಸಿ ಮಾತ್ರ ನೀರು ಸಂಗ್ರಹ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವರ್ಷ ಎರಡನೇ ಬೆಳೆಗೆ ನೀರು ಇಲ್ಲ ಎಂದು ಹೇಳಲಾಗಿದೆ. ಆದರೆ, ರೈತರು ಒತ್ತಡ ಹಾಕುತ್ತಿರುವುದರಿಂದ ಮತ್ತು ಹಿಂಗಾರು ಹಂಗಾಮಿನಲ್ಲಿಯೂ ಜಲಾಶಯಕ್ಕೆ ನೀರು ಹರಿದುಬಂದಿರುವುದರಿಂದ ಕ್ರಸ್ಟ್ ಗೇಟ್‌ ದುರಸ್ತಿ ಮಾಡಬೇಕೇ ಅಥವಾ ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡಬೇಕೇ ಎನ್ನುವುದು ಈಗ ಮಹತ್ವದ ವಿಷಯವಾಗಿದೆ. ಬೆಂಗಳೂರಿನಲ್ಲಿ ನ. 5ರಂದು ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.