ಹಾನಗಲ್ಲ ಪಟ್ಟಣದ ಜನರಿಗೆ 5 ದಿನಕ್ಕೊಮ್ಮೆ ನೀರು!

| Published : Apr 01 2025, 12:46 AM IST

ಸಾರಾಂಶ

ಲಭ್ಯವಿರುವ ನೀರನ್ನು ಬಳಸಿಕೊಳ್ಳದೇ ಸಾರ್ವಜನಿಕರನ್ನು ಸಮಸ್ಯೆಗೀಡು ಮಾಡುವ ಬದಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಜಲಮೂಲದ ಕೊರತೆ ಇಲ್ಲದಿದ್ದರೂ ನೀರು ಶುದ್ಧೀಕರಣ ಘಟಕದ ಸಾಮರ್ಥ್ಯದ ಕೊರತೆಯಿಂದ ಪಟ್ಟಣದ ಅಂದಾಜು 40 ಸಾವಿರ ಜನಸಂಖ್ಯೆಗೆ 5 ದಿನಗಳಿಗೊಮ್ಮೆ ನೀರು ಸರಬರಾಜಿಗೆ ಹರಸಾಹಸ ಮಾಡಬೇಕಾದ ಸ್ಥಿತಿ ಪುರಸಭೆಗಿದ್ದು, ಪಟ್ಟಣಕ್ಕೆ ಎರಡು ದಿನಗಳಿಗೆ ಒಮ್ಮೆಯಾದರೂ ನೀರು ಕೊಡುವ ವ್ಯವಸ್ಥೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಕಳೆದ ವರ್ಷ ಅತ್ಯುತ್ತಮ ಮಳೆಯಾಗಿದ್ದರಿಂದ ಧರ್ಮಾ ಜಲಾಶಯದಲ್ಲಿಯೂ ನೀರಿನ ಕೊರತೆ ಇಲ್ಲ. ಆನೆಕೆರೆಯಲ್ಲಿಯೂ ಸಾಕಷ್ಟು ನೀರಿದೆ. 119 ಎಕರೆ ವಿಸ್ತಾರದ ಆನೆಕೆರೆ ಕಳೆದ ಮುಂಗಾರಿನಲ್ಲಿ ತುಂಬಿಕೊಂಡಿತ್ತು. ಪಟ್ಟಣದಲ್ಲಿ 6 ಸಾವಿರ ಮನೆಗಳಿದ್ದು, 4500ಕ್ಕೂ ಅಧಿಕ ನಳಗಳಿವೆ. ಕೊಳವೆಬಾವಿಯಿಂದ ನೀರು ಪೂರೈಸುವ 76 ಮಿನಿ ವಾಟರ್ ಟ್ಯಾಂಕ್‌ಗಳಿವೆ. ಇದಕ್ಕೆ ಹೊರತಾಗಿಯೂ ಪುರಸಭೆ ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನಿತ್ಯ 40 ಲಕ್ಷ ಲೀ. ನೀರು ಸರಬರಾಜು ಮಾಡುವ ಅಗತ್ಯವಿದೆ. ಸದ್ಯ ಪುರಸಭೆ ಇಲ್ಲಿನ ನಾಗರಿಕರಿಗೆ 5 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜುಗೊಳಿಸುತ್ತಿದೆ.

ಮಳೆಗಾಲದ ನಂತರದಲ್ಲಿ ಪ್ರತಿ ವರ್ಷವೂ ಧರ್ಮಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಿ ಯಂತ್ರಗಳ ಮೂಲಕ 24x7 ಹಾನಗಲ್ಲಿನ ಆನೆಕೆರೆಗೆ ತುಂಬಿಸಲಾಗುತ್ತದೆ. ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ರವಾನಿಸಿ ಸಾರ್ವಜನಿಕರಿಗೆ ನೀರು ಸರಬರಾಜುಗೊಳಿಸಲಾಗುತ್ತದೆ. ಧರ್ಮಾ ಜಲಾಶಯದಲ್ಲಿ 15 ಅಡಿ ನೀರನ್ನು ಕುಡಿಯುವ ನೀರಿಗೆಂದು ಕಾಯ್ದಿರಿಸಲಾಗಿದೆ. ಅಲ್ಲಿಂದ ಸುಮಾರು 30 ದಿನಗಳ ಕಾಲ ನೀರು ಬಂದರೆ ಪಟ್ಟಣದ ಎಲ್ಲ ವಾರ್ಡ್‌ಗಳಿಗೂ 2- 3 ದಿನಕ್ಕೊಮ್ಮೆ ಸರಬರಾಜು ಮಾಡಲು ಸಾಧ್ಯವಿದೆ. ಬೇಸಿಗೆ ಕಾಲದಲ್ಲಿ ನೀರಿನ ಅಗತ್ಯತೆ ಬೇಡಿಕೆ ಹೆಚ್ಚಾಗಿರುವಾಗ ಕೆರೆಯಲ್ಲಿ ಮತ್ತು ಜಲಾಶಯದಲ್ಲಿ ನೀರಿದ್ದರೂ 2 ದಿನಗಳಿಗೊಮ್ಮೆ ಸರಬರಾಜು ಮಾಡಲು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುವಂತಾಗಿದೆ.

ಧರ್ಮಾ ಜಲಾಶಯದಿಂದ ಶುದ್ಧೀಕರಣ ಘಟಕದ ವರೆಗೆ ಅಮೃತ್ 2- 0 ಯೋಜನೆಯಡಿ ₹35.54 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆದಿದೆ. ಇದರಿಂದಾಗಿ ಮಾರ್ಗಮಧ್ಯೆ ನೀರು ಪೋಲಾಗದಂತೆ ಪೂರ್ಣ ಪ್ರಮಾಣದ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನಲಾಗುತ್ತಿದೆ. ಲಭ್ಯವಿರುವ ನೀರನ್ನು ಬಳಸಿಕೊಳ್ಳದೇ ಸಾರ್ವಜನಿಕರನ್ನು ಸಮಸ್ಯೆಗೀಡು ಮಾಡುವ ಬದಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಜಲಾಶಯದಿಂದ ಹಾಗೂ ಆನೆಕೆರೆಯಲ್ಲಿನ ನೀರನ್ನು ಶುದ್ಧೀಕರಣಗೊಳಿಸಲು ಸದ್ಯ ಈಗಿರುವ ಫಿಲ್ಟರ್ ಬೆಡ್ ಸಾಮರ್ಥ್ಯ ಸಾಕಾಗದಿರುವುದರಿಂದ 5 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಧರ್ಮಾ ಜಲಾಶಯದಿಂದ ನೇರ ಪೈಪ್‌ಲೈನ್ ಹಾಗೂ ಆನೆಕೆರೆಯಿಂದಲೂ ನೀರನ್ನು ಶುದ್ದೀಕರಣ ಘಟಕಕ್ಕೆ ಕೊಂಡೊಯ್ಯಲಾಗುತ್ತದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಇಲ್ಲಿನ ಘಟಕಕ್ಕಿಲ್ಲವಾಗಿದೆ. ಹೀಗಾಗಿ ಇನ್ನೊಂದು ಶುದ್ಧೀಕರಣ ಘಟಕ ಸ್ಥಾಪಿಸಿದರೆ ಮಾತ್ರ ಸಮಸ್ಯೆ ಬಗೆಹರಿಯಬಲ್ಲದು. ಅಥವಾ ಈಗಿರುವ ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಬೇಕಿದೆ. ಉನ್ನತೀಕರಣ: ಧರ್ಮಾ ಜಲಾಶಯದಿಂದ ಅಮೃತ್ 2- 0 ಕೇಂದ್ರ ಪುರಸ್ಕೃತ ಯೋಜನೆಯಡಿ ಪೈಪ್‌ಲೈನ್, ಫಿಲ್ಟರ್ ಬೆಡ್ ಉನ್ನತೀಕರಿಸುವ ಕಾಮಗಾರಿ ಚಾಲನೆಯಲ್ಲಿದೆ. ಈಗಿರುವ ಫಿಲ್ಟರ್ ಬೆಡ್ 5.46 ಎಂಎಲ್‌ಡಿ ಇದ್ದು, ಅದನ್ನು 8.5 ಎಂಎಲ್‌ಡಿಗೆ ಉನ್ನತೀಕರಿಸಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತದೆ. ಈ ಕಾಮಗಾರಿ ನಂತರ ಪಟ್ಟಣಕ್ಕೆ 24x7 ನೀರು ಪೂರೈಸಲು ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ತಿಳಿಸಿದರು.

ಸಮಸ್ಯೆ ಪರಿಹರಿಸಿ: ಹಾನಗಲ್ಲ ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ಈ ಎಲ್ಲ ಪ್ರದೇಶಗಳಿಗೆ ನಾಗರಿಕರ ಅಗತ್ಯಕ್ಕೆ ತಕ್ಕಂತೆ ನೀರೊದಗಿಸಲು ಪುರಸಭೆಗೆ ಸಾಧ್ಯವಾಗುತ್ತಿಲ್ಲ. ಜಲಾಶಯ ಹಾಗೂ ಆನೆಕೆರೆಯಲ್ಲಿ ನೀರಿನ ಸಂಗ್ರಹವಿದ್ದರೂ ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ. ಇರುವ ನೀರನ್ನು ಬಳಕೆ ಮಾಡಿಕೊಂಡು ಸರಬರಾಜು ಕೈಗೊಳ್ಳಲು ಇರುವ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಿಕೊಳ್ಳಬೇಕು. ನಾಗರಿಕ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಪಟ್ಟಣದ ನಾಗರಿಕರಾದ ಉದಯ ನಾಸಿಕ ಆಗ್ರಹಿಸಿದರು.