ಸಾರಾಂಶ
ವಿವಿ ಸಾಗರದ ಜಲಾಶಯದ ಅಚ್ಚುಕಟ್ಟು ರೈತ ಹಿತ ಕಾಪಾಡಲು ರಾಜ್ಯ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ. 3ನೇ ಬಾರಿ ಕೋಡಿ ಬಿದ್ದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ 1,274 ಕೋಟಿ ರು.ವೆಚ್ಚದ ಆಧುನೀಕರಣ ಯೋಜನೆ ಕೈಗೆತ್ತಿಕೊಂಡು ಅಚ್ಚುಕಟ್ಟುದಾರ ಹಿತ ಕಾಯುವುದಾಗಿ ಭರವಸೆ ನೀಡಿದ್ದಾರೆ.
ಚಿತ್ರದುರ್ಗ : ಜಲಮೂಲಗಳು ಕ್ಷೀಣಿಸಿರುವ ಹಿನ್ನಲೆ ಒಳ ಹರಿವಿನಿಂದ ಬಳಲಿರುವ ವಿವಿ ಸಾಗರದ ಜಲಾಶಯದ ಅಚ್ಚುಕಟ್ಟು ರೈತ ಹಿತ ಕಾಪಾಡಲು ರಾಜ್ಯ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ. 3ನೇ ಬಾರಿ ಕೋಡಿ ಬಿದ್ದ ಹಿನ್ನೆಲೆ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಬಿಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ 1,274 ಕೋಟಿ ರು.ವೆಚ್ಚದ ಆಧುನೀಕರಣ ಯೋಜನೆ ಕೈಗೆತ್ತಿಕೊಂಡು ಅಚ್ಚುಕಟ್ಟುದಾರ ಹಿತ ಕಾಯುವುದಾಗಿ ಭರವಸೆ ನೀಡಿದ್ದಾರೆ.
ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದೇ ಇರುವ ಕಾರಣಕ್ಕೆ ನಾಲಾಜಾಲಗಳ ಆಧುನೀಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. ವಿವಿ ಸಾಗರ ಜಲಾಶಯ ಭರ್ತಿಯಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಕಣ್ಣಿಗೆ ಕಂಡ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಹಂಚಿಕೆಯಾದ ನೀರಿನ ಪಾಲಿನ ಅನ್ವಯ ಬಳಕೆ ಸಾಧ್ಯತೆ ನಿರ್ಣಯವಾಗುತ್ತವೆ. ನೀರು ನಿರ್ವಹಣೆಗೆಂದೇ ಟ್ರಿಬ್ಯುನಲ್ ಇದೆ.
ವಿವಿ ಸಾಗರ ಜಲಾಶಯಕ್ಕೆ 1909 ರಿಂದ 2022 ರವರೆಗೆ ಬಿದ್ದಮಳೆ ದಾಖಲೆ ಹಾಗೂ ಹರಿದು ಬಂದಿರುವ ನೀರಿನ ಪ್ರಮಾಣ ವಾರ್ಷಿಕವಾಗಿ ಕೇವಲ 2.748 ಟಿಎಂಸಿಯಷ್ಟು ಮಾತ್ರ ಲಭ್ಯವಾಗಿದೆ. ವಿವಿ ಸಾಗರಕ್ಕೆ ಟ್ರಿಬ್ಯುನಲ್ ನಲ್ಲಿ (ಪರಿಷ್ಕೃತ ಮಾಸ್ಟರ್ ಪ್ಲಾನ್ -2002)5.25 ಟಿಎಂಸಿ ನೀರು ಹಂಚಿಕೆಯಾಗಿದ್ದರೂ ಕೊರತೆ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ 2 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. 2 ಟಿಎಂಸಿ ನೀಡಿದರೂ ಸಂಗ್ರಹದ ಪ್ರಮಾಣದ ಗುರಿ 5.25 ಮುಟ್ಟುವುದಿಲ್ಲ. ಹಾಗಾಗಿಯೇ ಅಚ್ಚುಕಟ್ಟು ರೈತರ ಹಿತ ಕಾಯಲು ನಾಲಾಜಾಲಗಳ ಆಧುನೀಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ.
ನೀರು ಸ್ವೇಚ್ಚಾಚಾರ ಬಳಕೆಗೆ ಬ್ರೇಕ್:
ಉದ್ದೇಶಿತ 1,274 ಕೋಟಿ ರು.ವೆಚ್ಚದ ನಾಲಾ ಜಾಲಗಳ ಆಧುನೀಕರಣ ಯೋಜನೆ ಸಾಕಾರಗೊಂಡಲ್ಲಿ ನೀರಿನ ಸ್ವೇಚ್ಚಾಚಾರ ಬಳಕೆಗೆ ಕಡಿವಾಣ ಬೀಳುತ್ತದೆ. ಇದುವರೆಗೆ ಅಚ್ಚುಕಟ್ಟುದಾರ ರೈತರಿಗೆ ಹಿಂಗಾರು ಹಂಗಾಮಿಗೆ ವಿತರಣಾ ಕಾಲುವೆ ಮೂಲಕ ನೀರು ನೇರವಾಗಿ ಜಮೀನಿಗೆ ಹರಿಯುತ್ತಿತ್ತು. 10 ತೆಂಗಿನ ಮರ ಇದ್ದವರೂ ಕೂಡಾ ಜಮೀನಲ್ಲಿ ಅರ್ಧ ಅಡಿ ನೀರು ನಿಲ್ಲಿಸಿಕೊಳ್ಳುತ್ತಿದ್ದರು. ಇದರಿಂದಾಗಿ ನೀರಿನ ಬಳಕೆ ಪ್ರಮಾಣ ಸಹಜವಾಗಿಯೇ ಹೆಚ್ಚಳವಾಗಿತ್ತು. ಕೊನೆ ಭಾಗದ ರೈತರಿಗೆ ನೀರು ಸಿಗುವುದು ಕಷ್ಟವಾಗಿತ್ತು. ಹಾಗಾಗಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ 12,135 ಹೆಕ್ಟೇರ್ ಅಚ್ಚುಕಟ್ಟಿಗೆ ನೀರು ಪೂರೈಸಲು ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿ ಕಾಲುವೆ ಕೊಳವೆ ಮೂಲಕ ನೀರು ನೀಡಲಾಗುತ್ತದೆ.
ವಿವಿ ಸಾಗರ ಜಲಾಶಯದ ಹಾಲಿ ಪ್ರಮುಖ ಕಾಲುವೆಗಳು ಶಿಥಿಲಾವಸ್ಥೆಯಲ್ಲಿದ್ದು, ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತದೆ. ಅದೇ ರೀತಿ ವಿತರಣಾ ಕಾಲುವೆ ಪರಿಸ್ಥಿತಿ ಭಿನ್ನವಾಗಿಲ್ಲ. ಆಧುನಿಕರಣ ಪ್ರಕ್ರಿಯೆಯಲ್ಲಿ ಎಲ್ಲ ಕಾಲುವೆಗಳ ಕಾಂಕ್ರಿಟ್ ಮೂಲಕ ಲೈನಿಂಗ್ ಮಾಡಿ ಸೋರುವಿಕೆ ತಡೆಯಲಾಗುತ್ತದೆ. ಕಾಲುವೆ ವ್ಯವಸ್ಥೆ ಮತ್ತು ರಚನೆಗಳಲ್ಲಿ ವಿನ್ಯಾಸ ದೋಷಗಳಿದ್ದರೆ ಸರಿಪಡಿಸಲಾಗುತ್ತದೆ. ಕಾಲುವೆಗಳ ಉದ್ದಕ್ಕೂ ಬೆಳೆದು ನಿಂತಿರುವ ಜಾಲಿ ಸೇರಿದಂತೆ ಕಾಡಿನ ಸ್ವರೂಪ ಹಾಗೂ ತುಂಬಿರುವ ಹೂಳು ತೆಗೆಯಲಾಗುತ್ತದೆ. ಲೈನಿಂಗ್‌ನಲ್ಲಿ ಬಿರುಕುಗಳು ಮೂಡದಂತೆ ಎಚ್ಚರವಹಿಸಿ ಭವಿಷ್ಯದಲ್ಲಿ ನಿರ್ವಹಣಾ ವೆಚ್ಚದಲ್ಲಿ ಕಡಿತ ಮಾಡುವ ಉದ್ದೇಶ ಹೊಂದಲಾಗಿದೆ.
*500 ಹೆಕ್ಟೇರ್‌ಗೊಂದು ಪಂಪ್ ಹೌಸ್:
ಅಚ್ಚುಕಟ್ಟು ದಾರ ರೈತರಿಗೆ ಡ್ರಿಪ್ ಮೂಲಕ ನೀರು ಕೊಡುವುದರಿಂದ ನೀರಿನ ಪ್ರೆಸರ್ ಕಾಯ್ದುಕೊಳ್ಳಲು ಪ್ರತಿ 500 ಹೆಕ್ಟೇರ್ ಒಂದರಂತೆ ಪಂಪ್‌ಹೌಸ್ ನಿರ್ಮಿಸಿ ಕಾಲುವೆಯಿಂದ ನೀರನ್ನು ಮೇಲೆತ್ತಲಾಗುತ್ತದೆ. ಇದಕ್ಕಾಗಿ 28 ಪಂಪ್‌ಹೌಸ್ ಅಳವಡಿಸಲಾಗುವುದು. ವಿವಿ ಸಾಗರಕ್ಕೆ ಹಾಲಿ ಹೈಲೆವಲ್ ಸೇರಿದಂತೆ ಎಡದಂಡೆ, ಬಲದಂಡೆ ಕಾಲುವೆ ಇದೆ. ಜಲಾಶಯದಲ್ಲಿ ಇರುವ 2 ಡಿಸ್‌ಚಾರ್ಚ್ ಪಾಯಿಂಟ್ ಮೂಲಕ ಏಕ ಕಾಲದಲ್ಲಿ ತಲಾ 325 ಕ್ಯೂಸೆಕ್ ನೀರು ಹೊರ ಬಿಡಬಹುದಾಗಿದೆ.
ಪ್ರಮುಖ ಕಾಲುವೆಗಳು ಭರ್ತಿಯಾದ ನಂತರ ಮೋಟರ್ ಪಂಪುಗಳ ಕಾರ್ಯಾರಂಭ ಮಾಡುತ್ತವೆ. ಪ್ರತಿ ರೈತರ ಜಮೀನುಗಳಿಗೆ ಒಂದು ಔಟ್‌ಲೆಟ್ ಕೊಡಲಾಗುತ್ತದೆ. ಕನಿಷ್ಟ 1 ಹೆಕ್ಟೇರ್‌ಗೆ ಒಂದರಂತೆ ಔಟ್ ಲೆಟ್ ಇರುತ್ತೆ. ಡ್ರಿಪ್ ಮೂಲಕ ರೈತರು ಫಸಲಿಗೆ ನೀರು ಹಾಯಿಸಿಕೊಳ್ಳಬಹುದಾಗಿದೆ. ಈ ಸೂಕ್ಷ್ಮ ನೀರಾವರಿ ಪದ್ದತಿಯಿಂದಾಗಿ ಅಚ್ಚುಕಟ್ಟುದಾರ ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತದೆ. ಹಿಂಗಾರಿಗೆ ಶೇ.50ರಷ್ಟು ಹಾಗೂ ಮುಂಗಾರಿಗೆ ಶೇ.100ರಷ್ಟು ಜಮೀನನ್ನು ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆಕ್ರಾಪ್ ಪ್ಯಾಟ್ರನ್ ಕೂಡ ನಿಗಧಿ ಮಾಡಲಾಗುತ್ತದೆ.