ಕೊಟ್ಟ ಮಾತಿನಂತೆ ‘ಹೇಮೆ’ಯಿಂದ ನುಗ್ಗೇಹಳ್ಳಿ ಕೆರೆಗೆ ನೀರು: ಶಾಸಕ ಸಿ.ಎನ್. ಬಾಲಕೃಷ್ಣ

| Published : Jul 30 2024, 12:37 AM IST

ಕೊಟ್ಟ ಮಾತಿನಂತೆ ‘ಹೇಮೆ’ಯಿಂದ ನುಗ್ಗೇಹಳ್ಳಿ ಕೆರೆಗೆ ನೀರು: ಶಾಸಕ ಸಿ.ಎನ್. ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಎಲ್ಲೆಂದರಲ್ಲಿ ಕಾಲುವೆಯನ್ನು ಒಡೆದು ಹಾನಿ ಮಾಡಿದರೆ ಅಂಥವರ ವಿರುದ್ಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲಾಗುತ್ತದೆ. ರೈತರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ .

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಕಳೆದ ವರ್ಷ ಹೇಮಾವತಿ ಜಲಾಶಯದಲ್ಲಿ ನೀರಿನ ಅಭಾವದಿಂದ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗಲಿಲ್ಲ. ಆದರೆ ಈ ವರ್ಷ ತಾವು ಕೊಟ್ಟ ಮಾತಿನಂತೆ ಪ್ರಾರಂಭದಲ್ಲೇ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಬಾಗೂರು ಹೋಬಳಿಯ ದ್ಯಾವೇನಹಳ್ಳಿ ಬಳಿ ಇರುವ ಹೇಮಾವತಿ ಮುಖ್ಯ ನಾಲೆಯ ಪಂಪ ಹೌಸ್ ನಲ್ಲಿ ನುಗ್ಗೇಹಳ್ಳಿ ಹಾಗೂ ಬಾಗೂರು ಏತ ನೀರಾವರಿ ಯೋಜನೆಯ ನೀರ ಎತ್ತುವ ಮೋಟಾರ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ ವಿವಿಧ ಏತ ನೀರಾವರಿ ಯೋಜನೆಗಳ ನಾಲೆಗಳ ಹೂಳೆತ್ತಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 58 ಲಕ್ಷ ರು. ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಇದರಿಂದ ನಾಲೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ವರ್ಷ ದೇವರ ಕೃಪೆಯಿಂದ ಹೇಮಾವತಿ ಜಲಾಶಯ ಸಂಪೂರ್ಣವಾಗಿ ತುಂಬಿದ್ದು, ಸುಮಾರು 5 ತಿಂಗಳ ಹೊರಗೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಮೊದಲ ಹಂತದಲ್ಲಿ ತಾವು ಕಳೆದ ವರ್ಷ ಕೊಟ್ಟ ಮಾತಿನಂತೆ ನುಗ್ಗೇಹಳ್ಳಿ ಕೆರೆಗೆ 30 ರಿಂದ 35 ದಿನಗಳವರೆಗೆ ನೀರು ಹರಿಸಲಾಗುತ್ತದೆ, ಯೋಜನೆ ವ್ಯಾಪ್ತಿಯ ರೈತರು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕಾಲುವೆ ಒಡೆದು ಹಾನಿ ಮಾಡದಿರಿ:

ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಎಲ್ಲೆಂದರಲ್ಲಿ ಕಾಲುವೆಯನ್ನು ಒಡೆದು ಹಾನಿ ಮಾಡಿದರೆ ಅಂಥವರ ವಿರುದ್ಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲಾಗುತ್ತದೆ. ರೈತರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಮುಖಂಡರಾದ ಬಾಗೂರು ಶಿವಣ್ಣ, ಓಬಳಾಪುರ ಬಸವರಾಜ್, ತೋಟಿ ನಾಗರಾಜ್, ಮರಿ ದೇವೇಗೌಡ, ಜೆ ಮಾವಿನಹಳ್ಳಿ ಎಂ.ಎಸ್. ಸುರೇಶ್, ಲಕ್ಷ್ಮಣ್, ಚಂದ್ರೇಗೌಡ, ಸ್ಟುಡಿಯೋ ರಘು, ಮಂಜುನಾಥ್, ಮಲ್ಲೇಶ್, ಎನ್ಎಸ್ ಮಂಜುನಾಥ್, ರಾಮಚಂದ್ರು, ಶಿವಶಂಕರ ಕುಂಟೆ, ಮಲ್ಲೇಶ್, ಎನ್ಎಸ್ ಲಕ್ಷ್ಮಣ್, ಹುಲಿಕೆರೆ ಸಂಪತ್ ಕುಮಾರ್, ಹೊನ್ನೇಗೌಡ, ಅಣ್ಣೇಗೌಡ, ಹೂವಿನಹಳ್ಳಿ ಬಾಬು, ದೀಪು ಸೇರಿ ಅನೇಕರು ಹಾಜರಿದ್ದರು.