ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರದಲ್ಲಿ ತೀವ್ರ ನೀರಿನ ಅಭಾವ ಎದುರಾಗಿದೆ. ಹಾಗಾಗಿ, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವುದು ಕಷ್ಟಕರವಾಗಿದೆ ಎಂದು ಮಹಾರಾಷ್ಟ್ರ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಮಾತ್ರವಲ್ಲದೇ ಹಿಂದಿನ ವರ್ಷಗಳಲ್ಲಿಯೂ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಮಹಾರಾಷ್ಟ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಿಡುಗಡೆಗೊಂಡಿಲ್ಲ. ಕೊಯ್ನಾ ಜಲಾಶಯ ಭರ್ತಿಯಾಗಿದ್ದ ಸಂದರ್ಭಗಳಲ್ಲಿಯೂ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರಲಿಲ್ಲ. ಪ್ರಸ್ತುತ ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವ ಇರುವುದರಿಂದ ಅಲ್ಲಿನ ಅಧಿಕಾರಿಗಳು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಇಲ್ಲ:
ಬೆಳಗಾವಿ ನಗರಕ್ಕೆ ಜುಲೈ ಅಂತ್ಯದವರೆಗೆ ಸಾಕಾಗುವಷ್ಟು ಕುಡಿಯುವ ನೀರಿನ ಸಂಗ್ರಹ ಘಟಪ್ರಭಾ (ಹಿಡಕಲ್) ಜಲಾಶಯದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಜಲಾಶಯಕ್ಕೆ ಇನ್ನೂ ನೀರಿನ ಒಳಹರಿವು ಆರಂಭವಾಗದ ಕಾರಣ ನೀರಿನ ಮಟ್ಟ ಕಡಿಮೆಯಾಗಿದೆಂಬ ಭಾವನೆ ಮೂಡಿದೆ. ಆದರೆ, ನಗರಕ್ಕೆ ಮುಂದಿನ ಎರಡು ತಿಂಗಳಿಗೆ ಬೇಕಾದಷ್ಟು ನೀರಿನ ಸಂಗ್ರಹವಿದ್ದು, ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಗರದ ಕೆಲ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾದರೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಅಗತ್ಯವಿದ್ದರೆ ಟ್ಯಾಂಕರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು. ನಗರದಲ್ಲಿ ಸಾಕಷ್ಟು ಕೊಳವೆಬಾವಿಗಳಿರುವುದರಿಂದ ಪರ್ಯಾಯ ನೀರಿನ ವ್ಯವಸ್ಥೆಯೂ ಲಭ್ಯವಿದೆ ಎಂದರು.ನಗರದಲ್ಲಿ ಜಾರಿಯಲ್ಲಿರುವ 24×7 ನಿರಂತರ ಕುಡಿಯುವ ನೀರು ಯೋಜನೆ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಕೇವಲ ಒಂದು ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ನಗರದಲ್ಲಿ ನೀರಿನ ಕೊರತೆ ಇಲ್ಲ. ಆದರೆ, ವಿತರಣಾ ವ್ಯವಸ್ಥೆ ಮತ್ತು ನಿರ್ವಹಣೆಯ ಸಮಸ್ಯೆಗಳಿವೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳೀಯ ನೀರಿನ ಸಮಸ್ಯೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ಸಮರ್ಪಕ ಮಾಹಿತಿ ತರುತ್ತಿಲ್ಲ. ಸಮಸ್ಯೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದರೇ ಮಾತ್ರ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಎಂದರು.ಹಿಡಕಲ್ ಜಲಾಶಯದ ಕೈಗಾರಿಕಾ ಬಳಕೆಗೆ ಮೀಸಲಾದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪೂರೈಸಲಾಗುತ್ತಿದೆ. ಆದರೆ, ಯಾವುದೇ ಹೆಚ್ಚುವರಿ ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತಿಲ್ಲ. ಕೈಗಾರಿಕೆಗಳಿಗೆ ನಿಗದಿತ ಮಿತಿಯಲ್ಲಿಯೇ ನೀರು ಒದಗಿಸಲಾಗುತ್ತಿದ್ದು, ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಯಾವುದೇ ದಿನಾಂಕ ನಿಗದಿಯಾಗಿಲ್ಲ. ಸುಮಾರು 20 ಸಚಿವ ಸ್ಥಾನಗಳು ಖಾಲಿ ಇದ್ದರೂ, ಆಕಾಂಕ್ಷಿಗಳ ಸಂಖ್ಯೆ 40ರಿಂದ 60ರಷ್ಟಿದೆ. ಜಾತಿ, ಪ್ರದೇಶ ಮತ್ತು ರಾಜಕೀಯ ಸಮೀಕರಣಗಳನ್ನು ಪರಿಗಣಿಸಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಬೆಳಗಾವಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಖಚಿತವಾಗಿದ್ದು, ಹೆಚ್ಚುವರಿ ಸ್ಥಾನ ನೀಡಬೇಕೇ ಎಂಬುವುದು ಹೈಕಮಾಂಡ್ ನಿರ್ಧಾರಕ್ಕೆ ಸೇರಿದೆ. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ.
-ಸತೀಶ ಜಾರಕಿಹೊಳಿ, ಸಚಿವರು.