ಸಾರಾಂಶ
ಗಂಗಾವತಿ:
ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಗಂಗಾವತಿ-ಕಂಪ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಭಾನುವಾರ ಬೆಳಗ್ಗೆಯಿಂದಲೇ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸೇತುವೆ ಬಳಿ ಬ್ಯಾರಿಕ್ಕೇಡ್ ಅಳವಡಿಸಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.ಗಂಗಾವತಿ ಮಾರ್ಗವಾಗಿ ಬಳ್ಳಾರಿ, ಆಂಧ್ರಪ್ರದೇಶದ ಆದೋನಿ, ಮಂತ್ರಾಲಯ, ಗುತ್ತಿಗೆ ಹೋಗುವ ಬಸ್‌ಗಳ ಸಂಚಾರ ರದ್ದುಪಡಿಸಲಾಗಿದೆ. ಬಸ್ ಸೇರಿದಂತೆ ಎಲ್ಲ ವಾಹನಗಳು ಕಡೇಬಾಗಿಲು, ಆನೆಗೊಂದಿ ಮಾರ್ಗವಾಗಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕೃಷ್ಣದೇವರಾಯ ಸಮಾಧಿ ಜಲಾವೃತ:ಸೋಮವಾರ ನದಿ ಉಕ್ಕೇರಿದ ಪರಿಣಾಮ ಆನೆಗೊಂದಿಯ ನದಿ ಮಧ್ಯದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಹಾಗೂ ಸಾಣಾಪುರ ಬಳಿ ಇರುವ ಋಷಿಮುಖ ಪರ್ವತ ಜಲಾವೃತಗೊಂಡಿದ್ದು, ಅಲ್ಲಿಯ ಅರ್ಚಕರು ಸೇರಿದಂತೆ ಕೆಲ ಭಕ್ತರು ಸುರಕ್ಷಿತವಾಗಿದ್ದಾರೆ. ತಾಲೂಕಿನ ಕಕ್ಕರಗೋಳ, ಹನುಮನಹಳ್ಳಿ ಸೇರಿದಂತೆ ನದಿ ತೀರದಲ್ಲಿರುವ ಗ್ರಾಮಗಳ ಜನತೆ ಜಾಗೃತಿಯಿಂದ ಇರುವಂತೆ ತಾಲೂಕಾಡಳಿತ ಸೂಚಿಸಿದೆ.
ನವವೃಂದಾವನಗಡ್ಡೆಯಲ್ಲಿ ಪೂಜೆ ರದ್ದು:ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿರುವ 9 ಯತಿವರೇಣ್ಯರ ವೃಂದಾವನಗಳಿಗೆ ನದಿಗೆ ಅಪಾರ ಪ್ರಮಾಣ ನೀರು ಬರುತ್ತಿರುವುದರಿಂದ ಜು. 4ರಿಂದಲೇ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ರದ್ದಾಗಿವೆ. ಪ್ರತಿ ದಿನ ಮಂತ್ರಾಲಯ ಮಠ ಮತ್ತು ಉತ್ತರಾದಿ ಮಠದ ಅರ್ಚಕರು ಬೋಟ್ ಮೂಲಕ ನವವೃಂದಾವನಗಡ್ಡೆಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೆ ಆಂಧ್ರ ಮತ್ತು ತಮಿಳುನಾಡಿನಿಂದ ಬರುತ್ತಿದ್ದ ಭಕ್ತರರನ್ನು ಬೋಟ್ ಮೂಲಕ ಸಂಚರಿಸಿ ದರ್ಶನ ಪಡೆಯುತ್ತಿದ್ದರು. ಬೋಟ್ ಸಂಚಾರ ಸಹ ರದ್ದುಪಡಿಸಲಾಗಿದ್ದು ವಿಜಯನಗರ ಜಿಲ್ಲೆಯ ಕಮಾಲಪುರ, ವೆಂಕಟಾಪುರದಿಂದಲೂ ನವವೃಂದಾವನಕ್ಕೆ ಹೋಗುವ ಬೋಟ್ ಸಂಚಾರ ರದ್ದುಪಡಿಸಲಾಗಿದೆ. ನದಿ ತೀರದಲ್ಲಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.