ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ನೀರು ; ರೋಗಿಗಳ ಪರದಾಟ

| Published : Aug 07 2024, 01:35 AM IST

ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ನೀರು ; ರೋಗಿಗಳ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗುಬ್ಬಿ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಜಲಾವೃತ

ಕನ್ನಡ ಪ್ರಭ ವಾರ್ತೆ ಗುಬ್ಬಿ

ಸೋಮವಾರ ರಾತ್ರಿ ಸುರಿದ ಜೋರು ಮಳೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಜಲಾವೃತಗೊಂಡು ಕೆಳ ಅಂತಿಸ್ತಿನ ಒಳ ರೋಗಿಗಳ ವಾರ್ಡಿನಲ್ಲಿದ್ದ ರೋಗಿಗಳು ಕೆಲ ಕಾಲ ಪರದಾಡಿದ ಘಟನೆ ನಡೆದಿದೆ.ರಾತ್ರಿ 8 ಗಂಟೆಯ ಸಮಯದಲ್ಲಿ ಆರಂಭವಾದ ಮಳೆಗೆ ಹೆದ್ದಾರಿಯ ನೀರು ತಗ್ಗು ಪ್ರದೇಶದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಹರಿದಿದ್ದರಿಂದ ಕೆಳ ಅಂತಸ್ತು ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದಾಗಿ ಒಳ ರೋಗಿಗಳ ವಾರ್ಡ್ ಗಳಲ್ಲಿದ್ದ ರೋಗಿಗಳನ್ನು ಮೇಲಿನ ಅಂತಸ್ತಿಗೆ ಕರೆದೊಯ್ಯಲಾಗಿದೆ.

ಒಳ ರೋಗಿಗಳ ದಾಖಲಾತಿ ಪ್ರಕಾರ 11 ಪುರುಷರು, 5 ಮಂದಿ ಮಹಿಳಾ ರೋಗಿಗಳನ್ನು ಮೇಲಂತಸ್ತಿಗೆ ಶಿಫ್ಟ್ ಮಾಡಿದ ಸಿಬ್ಬಂದಿ ಮಳೆ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. 100 ಹಾಸಿಗೆಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಎನ್ನುವ ಅಂಶಕ್ಕೆ ಕಳಂಕವಾಗಿ ಮಳೆ ನೀರು ವ್ಯವಸ್ಥಿತವಾಗಿ ಹರಿಸುವ ಚರಂಡಿ ಇಲ್ಲದಿರುವುದು ವಿಪರ್ಯಾಸ.

ಕ್ರಮಕ್ಕೆ ರೋಗಿಗಳ ಸಂಬಂಧಿಕರ ಆಗ್ರಹ

ಏಕಾಏಕಿ ನೀರು ಬಂದಿದ್ದರಿಂದ ಸಾಕಷ್ಟು ರೋಗಿಗಳಿಗೆ ತೊಂದರೆಯಾಗಿದ್ದು, ಇದಕ್ಕೆ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಷಾರಾಗಲಿ ಎಂದು ಆಸ್ಪತ್ರೆಗೆ ಬಂದರೆ ಇಲ್ಲಿ ಈ ರೀತಿ ತೊಂದರೆಯಾಗಿದೆ. ಆಸ್ಪತ್ರೆಗೆ ನೀರು ಹರಿದು ಬರುವುದನ್ನು ನಿಲ್ಲಿಸಬೇಕು. ನಿನ್ನೆ ರಾತ್ರಿ ನಮಗೆ ಜಲ ದಿಗ್ಬಂಧನಕ್ಕೆ ಒಳಗಾದ ಅನುಭವವಾಯಿತು. ಕೂಡಲೇ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.