ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
"ನಮಗ ಕುಡೀಲಿಕ್ಕೆ ನೀರು, ಸಾಲೀಗೆ ಮಾಸ್ತರ್ರು, ದವಾಖಾನಿಗೆ ಡಾಕ್ಟ್ರು ಕೊಡ್ರಿ ಸಾಕು...! ನಮ್ಮ ಯುವಕರು ಕೆಲಸಾ ಹುಡಕ್ಕೊಂಡು ದೊಡ್ಡೊ ದೊಡ್ಡ ಊರಿಗೆ ಹೋಗೋದ್ ಗುಳೇ ತಪ್ಪತದ. ಇಷ್ಟ ಮಾಡಿದ್ರ ಸಾಕ್, ಐದು ವರ್ಷ ನಾವು ಸರ್ಕಾರಕ್ಕ ಬ್ಯಾರೇ ಏನೂ ಕೇಳಂಗಿಲ್ಲ.. "ಬೆಳಗಾವಿ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಪ್ರಸ್ತಾಪಿಸಿದ್ದ ಯಾದಗಿರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ವಿಷಯಗಳು ಸದ್ದುಗದ್ದಲದಲ್ಲಿ ಮುಳಗಿದ್ದ ಸದನವನ್ನು ಕೆಲಕಾಲ ಗಂಭೀರಕ್ಕೆ ಕರೆದೊಯ್ದಿತ್ತು.
ಮಾಜಿ ಶಾಸಕ, ಜೆಡಿಎಸ್ ಹಿರಿಯ ನಾಯಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಕಂದಕೂರು, ಜಿಲ್ಲೆಯ ಸಮಸ್ಯಗಳ ಬಗ್ಗೆ ಮಾತನಾಡಿ ಗಮನ ಸೆಳೆದರಲ್ಲದೆ, ಪಕ್ಷಾತೀತ ಪರಿಹಾರಕ್ಕೆ ಆಗ್ರಹಿಸಿದರು. ಯಾದಗಿರಿ ಅನ್ನೋ ಜಿಲ್ಲೆಯೂ ಒಂದಿದೆ.ಉತ್ತರ ಕರ್ನಾಟಕ ಅಂದರೆ, ಹುಬ್ಬಳ್ಳಿ, ಧಾರವಾಡ, ವಿಜಯಪುರ ಮುಂತಾದವು ಅಷ್ಟೇ ಅಲ್ಲ, ರಾಜ್ಯದಲ್ಲಿ ಯಾದಗಿರಿ ಅನ್ನೋ ಜಿಲ್ಲೆಯೂ ಒಂದಿದೆ ಎನ್ನುವ ಮೂಲಕ ಆರಂಭದಲ್ಲೇ ಗಮನ ಸೆಳೆದ ಶಾಸಕ ಕಂದಕೂರು, ಜಿಲ್ಲೆಯ ಜನ-ಜೀವನ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲುವ ಯತ್ನ ನಡೆಸಿದರು.
ಕೃಷಿಯ ವೈಫಲ್ಯದಿಂದ ಇಲ್ಲಿನ ಜನರು ಬೆಂಗಳೂರು, ಮುಂಬೈ, ಪುಣೆಯಂತಹ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಕೈಗಾರಿಕೆಗಳು ಇಲ್ಲಿಲ್ಲ, ಅನೇಕ ಪ್ರಕರಣಗಳಲ್ಲಿ ಇಲ್ಲಿನವರು ಜೀವ ಕಳೆದುಕೊಂಡಿದ್ದೂ ಉಂಟು ಎಂದು ಆತಂಕ ವ್ಯಕ್ತಪಡಿಸಿದರು.ಗುರುಮಠಕಲ್ ಮತಕ್ಷೇತ್ರದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆಂದು ಸರ್ಕಾರ ಈ ಹಿಂದೆ 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿ ರಾಸಾಯನಿಕ ಕಾರ್ಖಾನೆಗಳ ಮೂಲಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಮಧ್ಯೆ, ಮತ್ತೇ ಹೊಸ ಯೋಜನೆಗಾಗಿ ಹೆಚ್ಚುವರಿಯಾಗಿ ಮತ್ತೆ 3300 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮತ್ತೆ ಸಾವಿರಾರು ಎಕರೆ ಸ್ವಾಧೀನಕ್ಕೆ ಮುಂದಾಗಿರುವುದನ್ನು ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಹೆಚ್ಚುವರಿ ಸ್ವಾಧೀನಪಡಿಸಿಕೊಂಡ ಜಮೀನು ರೈತರಿಗೆ ವಾಪಸ್ ನೀಡಿ, ಇಲ್ಲವಾದಲ್ಲಿ ಅಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿ ರೈತರ ಬದುಕು ಹಸನಾಗಿಸಿ, ಇಸ್ರೇಲ್ ಮಾದರಿ ಕೃಷಿಗೆ ಇಲ್ಲಿ ಉತ್ತೇಜನ ನೀಡಿದರೆ ಒಳ್ಳೆಯದು ಎಂದರು.
----------.......... ಬಾಕ್ಸ್...ಶಾಲೆಗಳಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ..!
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಅವರು, ಪ್ರತಿ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಬಂದಾಗ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿರುತ್ತದೆ. ಇದಕ್ಕೆ ಕಾರಣ ಸಿಬ್ಬಂದಿ ಇಲ್ಲದಿರುವುದು, ಶಿಕ್ಷಕರ ಕೊರತೆ. ಅನೇಕ ಶಾಲೆಗಳಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರೆ ಇಲ್ಲ. ಹೀಗಿರುವಾಗ, ಮಕ್ಕಳು ಅಧ್ಯಯನದಿಂದ ವಂಚಿತರಾಗುತ್ತಾರೆ. ಖಾಲಿ ಹುದ್ದೆಗಳ ಭರ್ತಿ ಮಾಡಿ ಶಿಕ್ಷಕರನ್ನು ನೀಡಿ ಎಂದರು.ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ:
ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದ ಶಾಸಕ ಕಂದಕೂರು, ತುರ್ತು ಸಂದರ್ಭಗಳಲ್ಲಿ ಬಡ ರೋಗಿಗಳು, ಗರ್ಭಿಣಿಯರು ನೆರೆಯ ಕಲಬುರಗಿ, ರಾಯಚೂರು, ಹೈದರಾಬಾದ್ ಹಾಗೂ ಸೋಲಾಪುರದಂತಹ ನಗರಗಳಿಗೆ ತೆರಳುತ್ತಾರೆ. ದುಬಾರಿ ಚಿಕಿತ್ಸೆ ಬಡವರು ಪಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದರು. ----12ವೈಡಿಆರ್2ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಂಗವಾರ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದರು.