ಸಾರಾಂಶ
ತಾಲೂಕಿನ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜಿಗೆ ಅಳವಡಿಸಿದ ಗೇಟುಗಳಿಂದ ನೀರು ಸೋರಿಕೆಯಾಗಿ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದರಿಂದ ರೈತರು ಬೆಳೆದಿರುವ ತರಕಾರಿ ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಚಿಂಚೋಳಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶಸಿಂಗ್ ಠಾಕೂರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜಿಗೆ ಅಳವಡಿಸಿದ ಗೇಟುಗಳಿಂದ ನೀರು ಸೋರಿಕೆಯಾಗಿ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದರಿಂದ ರೈತರು ಬೆಳೆದಿರುವ ತರಕಾರಿ ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಚಿಂಚೋಳಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶಸಿಂಗ್ ಠಾಕೂರ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ವರ್ಷವಿಡಿ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಕೊಟಗಾ, ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಭೂಯ್ಯಾರ(ಕೆ)ಅಣವಾರ, ಗರಗಪಳ್ಳಿ, ಇರಗಪಳ್ಳಿ, ಜಟ್ಟೂರ, ಸೋಮಲಿಂಗಳದಳಿ, ಶಾದೀಪೂರ, ಗ್ರಾಮಗಳ ರೈತರು ಬೆಳೆದ ತೊಗರಿ, ಜೋಳ, ಕಡಲೇ, ತರಕಾರಿ ಬೆಳೆಗಳಿಗೆ ನೀರಿನ ಸೌಲಭ್ಯ ಹಾಗೂ ರಸ್ತೆ ಸಂಪರ್ಕ ಒದಗಿಸುವುದಕ್ಕಾಗಿ ಬ್ಯಾರೇಜ್ ನಿರ್ಮಿಸಲಾಗಿದೆ.
ಆದರೆ, ಬ್ಯಾರೇಜಿಗೆ ಅಳವಡಿಸಿದ ಗೇಟುಗಳು ಅತ್ಯಂತ ಕಳೆಪೆಮಟ್ಟದಿಂದ ಕೂಡಿರುವುದರಿಂದ ಗೇಟುಗಳು ನೀರಿನ ರಭಸಕ್ಕೆ ಬಿರುಕು ಉಂಟಾಗಿ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದರು.ಬ್ಯಾರೇಜ್ ನಿರ್ಮಾಣ ಜೊತೆಗೆ ದನ-ಕರುಗಳಿಗೆ ಬೇಸಿಗೆ ದಿನಗಳಲ್ಲಿ ನೀರು ಕುಡಿಯುವುದಕ್ಕಾಗಿ ಶಾಸಕ ಡಾ|ಅವಿನಾಶ ಜಾಧವ್ ಸರ್ಕಾರದಿಂದ ಕೋಟ್ಯಾಂತರ ರು.ಅನುದಾನ ಮಂಜೂರಿಗೊಳಿಸಿ ಬ್ಯಾರೇಜ್ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷತನ ಮತ್ತು ಸಿಬ್ಬಂದಿಗಳ ಬೇಜಬ್ದಾರಿತನದಿಂದಾಗಿ ಬ್ಯಾರೇಜ್‌ಗಳ ನಿರ್ವಹಣೆ ಇಲ್ಲದೇ ನೀರು ಸೋರಿಕೆಯಾಗುತ್ತಿದೆ. ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆಗಳು ತುಂಬಾ ದುಸ್ಥಿತಿಯಲ್ಲಿವೆ. ಸರ್ಕಾರವು ನಿರ್ವಹಣೆಗಾಗಿ ಅನುದಾನ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ ಎಂದರು.