ಸಾರಾಂಶ
ಕೋಕ್ತಿಯ ಒಳಚಂಡಿ ಛೇಂಬರಿನಲ್ಲಿ ಧಾರಾಕಾರವಾಗಿ ರಕ್ತಮಿಶ್ರಿತ ನೀರು ಹರಿಯುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮ್ಯಾನ್‌ಹೋಲ್‌ನಲ್ಲಿ ಶೇಖರಣೆ ಆಗಿರುವ ರಕ್ತದ ನೀರನ್ನು ಹೊರಹಾಕಲು ಪಂಪ್ ಕೂಡ ಬಳಸಲಾಗಿದೆ.
ಭಟ್ಕಳ: ಪಟ್ಟಣದ ಕೋಕ್ತಿ ನಗರದಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ನೀರಿನೊಂದಿಗೆ ಪ್ರಾಣಿ ವಧೆಯ ರಕ್ತ ಸೇರಿಕೊಂಡು ಹರಿಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ತದ ನೀರು ಧಾರ್ಮಿಕ ಹಿನ್ನೆಲೆಯುಳ್ಳ ಕೋಕ್ತಿ ಕೆರೆಗೂ ಸೇರಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕೋಕ್ತಿಯಲ್ಲಿ ಹೊಸದಾಗಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಪ್ರಾಣಿ ವಧೆಯ ರಕ್ತ ಹೊಸದಾಗಿ ನಿರ್ಮಿಸಿದ ಒಳಚರಂಡಿಗೆ ಹೇಗೆ ಸೇರಿಕೊಂಡಿತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಮಂಗಳವಾರ ಬೆಳಗ್ಗೆ ಭಾರಿ ಮಳೆ ಬಿದ್ದ ಸಂದರ್ಭದಲ್ಲಿ ಪ್ರಾಣಿ ವಧೆಯ ರಕ್ತ ಕೋಕ್ತಿನಗರ ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ಧಾರಾಕಾರವಾಗಿ ಹರಿದು ಹೋಗುತ್ತಿತ್ತು. ಅದಲ್ಲದೇ ಈ ರಕ್ತದ ನೀರು ಸನಿಹದ ಕೋಕ್ತಿ ಕೆರೆಗೂ ಸೇರಿದ್ದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು.
ಕೋಕ್ತಿಯ ಒಳಚಂಡಿ ಛೇಂಬರಿನಲ್ಲಿ ಧಾರಾಕಾರವಾಗಿ ರಕ್ತಮಿಶ್ರಿತ ನೀರು ಹರಿಯುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮ್ಯಾನ್‌ಹೋಲ್‌ನಲ್ಲಿ ಶೇಖರಣೆ ಆಗಿರುವ ರಕ್ತದ ನೀರನ್ನು ಹೊರಹಾಕಲು ಪಂಪ್ ಕೂಡ ಬಳಸಲಾಗಿದೆ. ಮಧ್ಯಾಹ್ನದ ವರೆಗೂ ಮ್ಯಾನ್‌ಹೋಲ್‌ನಲ್ಲಿ ಇದ್ದ ರಕ್ತ ಮಿಶ್ರಿತ ನೀರನ್ನು ಪಂಪ್ ಮೂಲಕ ಹೊರ ಹಾಕುವ ಕೆಲಸ ಮಾಡಲಾಗಿದೆ. ಸಂಜೆ ಕಾರವಾರದಿಂದ ಜಲಮಂಡಳಿ ಅವರೂ ಆಗಮಿಸಿ ಪರಿಶೀಲಿಸಿದ್ದಾರೆನ್ನಲಾಗಿದೆ. ಹೊಸದಾಗಿ ನಿರ್ಮಿಸಲಾದ ಒಳಚರಂಡಿ ಪೈಪ್‌ಲೈನಿಗೆ ಪ್ರಾಣಿವಧೆಯ ರಕ್ತ ಹರಿಬಿಟ್ಟರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ: ಕೋಕ್ತಿಯ ಒಳಚರಂಡಿ ಮ್ಯಾನ್‌ಹೋಲ್‌ನಿಂದ ರಕ್ತದ ನೀರು ಹೊರಗೆ ಬರುತ್ತಿರುವುದು ಮತ್ತು ಇದು ಹಿಂದೂಗಳ ಧಾರ್ಮಿಕ ಹಿನ್ನೆಲೆಯುಳ್ಳ ಕೋಕ್ತಿ ಕೆರೆಗೆ ಸೇರ್ಪಡೆ ಆಗಿರುವುದು ತೀರಾ ಖಂಡನೀಯ. ಹೊಸ ಒಳಚರಂಡಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಮನೆಗೆ ಇನ್ನೂ ಸಂಪರ್ಕ ಕೊಡದೇ ಇರುವಾಗ ಈ ಪೈಪಿನಿಂದ ರಕ್ತಸಿಕ್ತ ನೀರು ಹೇಗೆ ಬಂತು? ಇದನ್ನು ಯಾರು ಬಿಟ್ಟಿದ್ದಾರೆನ್ನುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ ಆಗ್ರಹಿಸಿದರು.