5ನೇ ದಿನವೂ ಬಾರದ ನೀರು: ಕಾದು ಕೆಂಡವಾದ ರೈತರು

| Published : Mar 26 2024, 01:01 AM IST

5ನೇ ದಿನವೂ ಬಾರದ ನೀರು: ಕಾದು ಕೆಂಡವಾದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಜಲಾಶಯದಿಂದ ನಾಲೆಗೆ ನೀರುಬಿಟ್ಟು 5 ದಿನಗಳೇ ಕಳೆದರೂ ಇನ್ನೂ ನೀರು ತಲುಪದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಹೊರವಲಯದ ಶಿರಮಗೊಂಡನಹಳ್ಳಿ ಕ್ರಾಸ್‌ ಭದ್ರಾ ಸೇತುವೆ ಮೇಲೆ ಅಚ್ಚುಕಟ್ಟು ವ್ಯಾಪ್ತಿ ರೈತರು ಸೋಮವಾರ ಚನ್ನಗಿರಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ, 2ನೇ ದಿನವೂ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಜಲಾಶಯದಿಂದ ನಾಲೆಗೆ ನೀರುಬಿಟ್ಟು 5 ದಿನಗಳೇ ಕಳೆದರೂ ಇನ್ನೂ ನೀರು ತಲುಪದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಶಿರಮಗೊಂಡನಹಳ್ಳಿ ಕ್ರಾಸ್‌ ಭದ್ರಾ ಸೇತುವೆ ಮೇಲೆ ಅಚ್ಚುಕಟ್ಟು ವ್ಯಾಪ್ತಿ ರೈತರು ಸೋಮವಾರ ಚನ್ನಗಿರಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ, 2ನೇ ದಿನವೂ ಪ್ರತಿಭಟಿಸಿದರು.

ರೈತ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿ.ನಾಗೇಶ್ವರ ರಾವ್ ಇತರರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಮರ್ಪಕ ನೀರು ಪೂರೈಸಲು ಒತ್ತಾಯಿಸಿ ರೈತರು ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಧಾವಿಸಿದ ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಆರ್‌.ಮಂಜುನಾಥ ಜೊತೆಗೆ ರೈತರು ತೀವ್ರ ವಾಗ್ವಾದ ನಡೆಸಿದರು.

ಡ್ಯಾಂನಿಂದ ನೀರು ಹರಿಸಿದ 2 ದಿನದಲ್ಲೇ ಶಿರಮಗೊಂಡನಹಳ್ಳಿ ಕಾಲುವೆಗೆ ನೀರು ಬರುತ್ತಿತ್ತು. ಹೋಳಿ ಹಬ್ಬ ಆಚರಿಸಿದ ಯುವಕರು ಇಲ್ಲಿ ಬಂದು ಮುಳುಗಿ, ಸ್ನಾನ ಮಾಡುತ್ತಿದ್ದರು. ಸೇತುವೆ ಮೇಲಿನಿಂದ ನೀರಿಗೆ ಹಾಕುತ್ತಿದ್ದರು. ಆದರೆ, ಈಗ ಕೈ-ಕಾಲು ತೊಳೆಯುವುದಿರಲಿ, ಪಾದ ತೊಯ್ಯುವಷ್ಟೂ ನೀರಿಲ್ಲ. ಈಗ 5 ದಿನವಾದರೂ ಡ್ಯಾಂ ನೀರು ಬಂದೇ ಇಲ್ಲ ಎಂದು ಕಿಡಿಕಾರಿದರು.

ಹೋರಾಟ ಡಿಸಿ ಸಭಾಂಗಣಕ್ಕೆ ಶಿಫ್ಟ್‌:

ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಎಸ್‌ಇ ಆರ್.ಮಂಜುನಾಥ, ಎಲ್ಲ ರೈತರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ದರು. ಅನಂತರ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಪಾಟೀಲ್‌, ಪಾಲಿಕೆ ಆಯುಕ್ತೆ ರೇಣುಕಾ, ನೀರಾವರಿ ನಿಗಮದ ಇಇ ಆರ್.ಮಂಜುನಾಥ ರೈತರೊಂದಿಗೆ ಸಭೆ ನಡೆಸಿದರು.

ರೈತ ಮುಖಂಡ ಬಿ.ಎಂ.ಸತೀಶ ಮಾತನಾಡಿ, ಜಿಲ್ಲೆಗೆ ಬರಬೇಕಾದ ಪ್ರಮಾಣದ ನೀರು ಬರುತ್ತಿಲ್ಲ. ಶಿವಮೊಗ್ಗಕ್ಕೆ ಒಂದು ವೇಳಾಪಟ್ಟಿ, ದಾವಣಗೆರೆಗೆ ಮತ್ತೊಂದು ವೇಳಾಪಟ್ಟಿ ಪ್ರಕಟಿಸಿರುವುದು ತಾರತಮ್ಯ ನೀತಿಯಾಗಿದೆ. ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ವೇಳಾಪಟ್ಟಿಯೇ ಅವೈಜ್ಞಾನಿಕವಾಗಿದೆ. ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ ಅವರು ಐಸಿಸಿ ಸಭೆಗೆ ಹಾಜರಾಗಿ, ನಮ್ಮ ಜಿಲ್ಲೆಯಲ್ಲಿ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶವಿದ್ದು, ಡ್ಯಾಂನಿಂದ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಲು ನೀರಿನ ಹರಿವಿನ ಪ್ರಮಾಣ, ಒತ್ತಡ ಹೆಚ್ಚಿದ್ದರೆ ಮಾತ್ರ ಮತ್ತು ನೀರು ಬಿಡುವ ಅವಧಿ ಹೆಚ್ಚಾಗಿದ್ದರೆ ಮಾತ್ರ ಕೊನೆಯ ಭಾಗಕ್ಕೆ ತಲುಪುತ್ತದೆಂಬುದನ್ನು ಯಾಕೆ ಮನವರಿಕೆ ಮಾಡಿಕೊಡಲಿಲ್ಲ ಎಂದು ಪ್ರಶ್ನಿಸಿದರು.

ರೈತ ಮುಖಂಡ ಬೆಳವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭದ್ರಾ ನಾಲೆಯುದ್ದಕ್ಕೂ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಮಿತಿ ಮೀರಿದೆ. ಪಂಪ್ ಸೆಟ್‌ಗಳ ತೆರವು ಕಾರ್ಯಾಚರಣೆ ಕೇವಲ ನೆಪಮಾತ್ರಕ್ಕೆ ನಡೆಯುತ್ತಿದೆ. ತೋರಿಕೆಗೆ ಅಕ್ರಮ ಪಂಪ್ ಸೆಟ್ ತೆರವು ಮಾಡಿಸುವ ಬದಲಿಗೆ, ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ಕೊಡಬೇಕೆಂಬ ಬದ್ಧತೆಯಿಂದ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಕುಂದುವಾಡ, ಮಾಜಿ ಮೇಯರ್ ಎಚ್‌.ಎನ್‌. ಗುರುನಾಥ, ಮುಖಂಡರಾದ ಜಿಮ್ಮಿ ಹನುಮಂತಪ್ಪ, ಬಿ.ಮಹೇಶಪ್ಪ, ಭಾಸ್ಕರ ರೆಡ್ಡಿ, ಆರುಂಡಿ ಪುನೀತ್, ಅಣ್ಣಪ್ಪ, ಎಚ್.ಎನ್.ಮಹಾಂತೇಶ, ಎಚ್.ಎಸ್. ಸೋಮಶೇಖರ, ಕ್ಯಾಂಪ್ ನಾಗೇಶ್ವರ ರಾವ್‌, ರಾಮಕೃಷ್ಣಪ್ಪ, ಆರನೇಕಲ್ಲು ವಿಜಯಕುಮಾರ ಇತರರು ಇದ್ದರು.

- - -

ಬಾಕ್ಸ್‌

ನಾಲೆಯುದ್ದಕ್ಕೂ ಕರೆಂಟ್‌ ಸ್ಥಗಿತಕ್ಕೆ ಡಿಸಿ ಸೂಚನೆ

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮಾತನಾಡಿ, ಭದ್ರಾ ನಾಲೆಯುದ್ದಕ್ಕೂ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಳಿಸಬೇಕು. ನೀರಾವರಿ ಎಂಜಿನಿಯರ್‌ಗಳು ಪೊಲೀಸ್ ಇಲಾಖೆ ರಕ್ಷಣೆಯೊಂದಿಗೆ ಕಾಲುವೆಯಿಂದ ಅಕ್ರಮ ನೀರು ಎತ್ತುವವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕೊನೆಯ ಭಾಗದ ಅಚ್ಚುಕಟ್ಟು ರೈತರ ಜಮೀನುಗಳಿಗೂ ನೀರು ತಲುಪಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನೀರಾವರಿ, ಬೆಸ್ಕಾಂ, ಪೊಲೀಸ್, ಕಂದಾಯ ಅಧಿಕಾರಿಗಳು ಹೊಣೆಗಾರಿಕೆ ಮೆರೆಯುವಂತೆ ಆದೇಶಿಸಿದರು.

- - - (* ಈ ಸುದ್ದಿಗೆ ಯಾವುದಾದರೂ ಒಂದೇ ಫೋಟೋ ಬಳಸಿ)-25ಕೆಡಿವಿಜಿ5, 6:

ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ಸೇತುವೆ ಬಳಿ ಪ್ರತಿಭಟನೆ ವೇಳೆ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರ ಜೊತೆಗೆ ರೈತ ಮುಖಂಡರು ತೀವ್ರ ವಾಗ್ವಾದ ನಡೆಸಿದರು.

-25ಕೆಡಿವಿಜಿ7:

ದಾವಣಗೆರೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅಧ್ಯಕ್ಷತೆಯಲ್ಲಿ ರೈತರು, ನೀರಾವರಿ, ಬೆಸ್ಕಾಂ, ಕಂದಾಯ, ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.