ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರು: ಮಾದಿಹಳ್ಳಿ ಸೇತುವೆ ಮುಳುಗಡೆ

| Published : Oct 22 2024, 12:00 AM IST / Updated: Oct 22 2024, 12:01 AM IST

ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರು: ಮಾದಿಹಳ್ಳಿ ಸೇತುವೆ ಮುಳುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಿಹಳ್ಳಿಯ ಸೇತುವೆ ಹಾಳಾಗಿ ಮೂರ್‍ನಾಲ್ಕು ವರ್ಷಗಳಾಗಿವೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸದ ಕಾರಣ ಗ್ರಾಮಸ್ಥರು, ಸದಸ್ಯ ಶ್ರೀಧರ್ ಸಹಕಾರದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡು ಓಡಾಡುತ್ತಿದ್ದರು. ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರಿನಿಂದ ಸೇತುವೆ ಕೊಚ್ಚಿ ಹೋಗಿದೆ. ದೊಡ್ಡ ಪ್ರಮಾಣದಲ್ಲಿ ನೀರಿನ ಕೊರಕಲು ಸೇತುವೆ ಬಳಿ ಮೂಡಿದ್ದು, ಬೇರೆ ಸ್ಥಳಗಳಿಗೆ ಗ್ರಾಮಸ್ಥರು ತೆರಳಲಾಗದೆ ಜಲದಿಗ್ಬಂಧನ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ಪಟ್ಟಣದ ಅಮಾನಿಕೆರೆಗೆ ಹರಿದು ಬರುವ ನೀರಿನ ಮೂಲ ಪ್ರದೇಶ ಸಾಸಲು, ದೇವರಹಳ್ಳಿ, ಮಾದಿಹಳ್ಳಿ ಕಾಲುವೆಯಲ್ಲಿ ಹೆಚ್ಚಿನ ನೀರು ಬಂದ ಕಾರಣ ಕಾಲುವೆ ದಂಡೆಯ ಹೊಲಗದ್ದೆ ಮುಳುಗಡೆಯಾಗಿವೆ.

ಸಾಸಲು ಗ್ರಾಮದಿಂದ ಐನೋರಹಳ್ಳಿ ಗ್ರಾಮಕ್ಕೆ, ಅಂಕನಹಳ್ಳಿಯಿಂದ ದೇವರಹಳ್ಳಿ ಗ್ರಾಮಕ್ಕೆ ಹಾಗೂ ಬೂವಿನಹಳ್ಳಿ ಮಾರ್ಗದಿಂದ ಮಾದಿಹಳ್ಳಿಗೆ ಕಲ್ಪಿಸುವ ರಸ್ತೆ ಸೇತುವೆ ಸಂಪೂರ್ಣ ಜಲಾವೃತವಾಗಿವೆ.

ಮಾದಿಹಳ್ಳಿಯ ಸೇತುವೆ ಹಾಳಾಗಿ ಮೂರ್‍ನಾಲ್ಕು ವರ್ಷಗಳಾಗಿವೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸದ ಕಾರಣ ಗ್ರಾಮಸ್ಥರು, ಸದಸ್ಯ ಶ್ರೀಧರ್ ಸಹಕಾರದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡು ಓಡಾಡುತ್ತಿದ್ದರು.

ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರಿನಿಂದ ಸೇತುವೆ ಕೊಚ್ಚಿ ಹೋಗಿದೆ. ದೊಡ್ಡ ಪ್ರಮಾಣದಲ್ಲಿ ನೀರಿನ ಕೊರಕಲು ಸೇತುವೆ ಬಳಿ ಮೂಡಿದ್ದು, ಬೇರೆ ಸ್ಥಳಗಳಿಗೆ ಗ್ರಾಮಸ್ಥರು ತೆರಳಲಾಗದೆ ಜಲದಿಗ್ಬಂಧನ ವಿಧಿಸಿದೆ.

ಗ್ರಾಮದಿಂದ ನಿತ್ಯ ಬೇರೆ ಸ್ಥಳಕ್ಕೆ ತೆರಳಬೇಕಿದ್ದ ಹಲವು ಶಾಲಾ, ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರ ಹೋಗಲಾಗದೆ ಗ್ರಾಮದಲ್ಲಿ ಉಳಿದರು.

ನೀರಿನ ರಭಸಕ್ಕೆ ಕಾಲುವೆ ದಂಡೆಯಲ್ಲಿನ ಭತ್ತ, ಜಾನುವಾರು ಮೇವಿನ ಹುಲ್ಲು, ತೆಂಗು, ಬಾಳೆ, ಅಡಿಕೆ ತೋಟಗಳು ಜಲಾವೃತವಾಗಿದೆ. ರಾಸುಗಳಿಗೆ ಮೇವು ತರಲಾಗದೆ ರೈತರು ಕಂಗಾಲಾಗಿದ್ದಾರೆ. ದಿಂಕ, ಸೊಳ್ಳೇಪುರ ಮಾರ್ಗವಾಗಿ ಗ್ರಾಮಕ್ಕೆ ಸುತ್ತಿ ಬಳಸಿಕೊಂಡು ತ್ರಾಸಕರವಾಗಿ ಹಲವರು ತಲುಪಲು ಪರದಾಡಿದರು. ಸೇತುವೆ ನಿರ್ಮಾಣವನ್ನು ಮಾಡಿಸಿಕೊಡುವುದಾಗಿ ಈ ಹಿಂದೆ ಇದ್ದ ಮಾಡಿ ಸಚಿವ ಕೆ.ಸಿ. ನಾರಾಯಣಗೌಡರ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.