ಸಾರಾಂಶ
ತಾಲೂಕಿನ ರೈತರಲ್ಲಿ ಇದೀಗ ಮಂದಹಾಸದ ನಗೆ ಮೂಡಿದೆ.
ಉತ್ತಮ ಮಳೆಯಿಂದ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ
ಜಿ. ಸೋಮಶೇಖರಕನ್ನಡಪ್ರಭ ವಾರ್ತೆ ಕೊಟ್ಟೂರು
ತಾಲೂಕಿನ ರೈತರಲ್ಲಿ ಇದೀಗ ಮಂದಹಾಸದ ನಗೆ ಮೂಡಿದೆ. 500ಕ್ಕೂ ಹೆಚ್ಚು ಅಡಿ ಭೂಮಿ ಕೊರೆಸಿದರೂ ನೀರು ಸಿಗದ ಅದೆಷ್ಟೋ ರೈತರು ಆತಂಕಗೊಳ್ಳುತ್ತಿದ್ದರು. ಈಗ ಕಡಿಮೆ ಆಳದಲ್ಲಿಯೇ ಕೊರೆಸಿದ ಬೋರುಗಳಲ್ಲಿ ನೀರು ಯಥೇಚ್ಚವಾಗಿ ಉಕ್ಕಿ ಹರಿಯ ತೋಡಗಿದೆ. ಇದರಿಂದ ರೈತ ಸಮೂಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ನಾಲ್ಕೈದು ರೈತರ ಭೂಮಿಗಳಲ್ಲಿ ಕೊರೆಸಿದ ಬೋರ್‌ಗಳಲ್ಲಿ ಇತ್ತೀಚೆಗೆ ಮತ್ತು ಕಳೆದ ವರ್ಷ ಸುರಿದ ಉತ್ತಮ ಮಳೆಗೆ ನೀರು ಉಕ್ಕಿ ಹರಿಯ ತೋಡಗಿದೆ. ಅಲ್ಲದೇ ಅಂತರ್ಜಲ ಮಟ್ಟ ಸುತ್ತಮುತ್ತಲಿನ ಬಹುತೇಕ ಪ್ರದೇಶಗಳಲ್ಲಿ ಹೆಚ್ಚಾಗಿದೆ.
ಸತತ ಬರಗಾಲ ಮತ್ತು ಮಳೆ ಕೊರೆತೆಯಿಂದ ನಿರಂತರ ಬೆಳೆ ಹಾನಿ ಸಂಭವಿಸಿ ಬೇರೆ ಕಡೆ ಗುಳೆ ಹೋಗಲು ಮನಸ್ಸು ಮಾಡಿದ್ದ ರೈತರಲ್ಲಿ ಈ ವರ್ಷದಲ್ಲಿನ ಮಳೆ ಆಶಾಭಾವನೆ ಮೂಡಿಸಿದೆ. ಬೋರ್‌ಗಳಲ್ಲಿ ಕನಿಷ್ಠ 50 ಅಡಿಗಳಲ್ಲಿಯೇ ನೀರು ದೊರೆಯುವಂತಾಗಿದ್ದು, ರೈತರಲ್ಲಿ ಮತ್ತೆ ಕೃಷಿಯ ಬಗ್ಗೆ ಒಲವು ಮೂಡುವಂತಾಗಿದೆ.ಬೋರ್‌ಗಳಲ್ಲಿ ನೀರಿನ ಕೊರತೆ ಉಂಟಾದ ಕಾರಣ ತಾಲೂಕಿನ ಬಹುತೇಕ ಗ್ರಾಮಗಳ ಗ್ರಾಪಂ ಆಡಳಿತ ಹೊಲಗಳಲ್ಲಿ ರೈತರ ಬೋರ್‌ಗಳನ್ನು ಬಾಡಿಗೆಗೆ ಪಡೆದು ಜನತೆಗೆ ನೀರು ಪೂರೈಸುತ್ತಿತ್ತು. ಹೀಗೆ ನೀರಿನ ಕೊರತೆಯನ್ನು ಎದುರಿಸಲು ಸ್ಥಳೀಯ ಆಡಳಿತ ಎಲ್ಲಾ ಬಗೆಯ ಕಸರತ್ತನ್ನು ಮಾಡುವಂತಾಗಿತ್ತು. ಈಗ ಆ ಸಂಕಷ್ಟ ತಪ್ಪಲಿದೆ.
ಬಾಡಿದ ಬೆಳೆಗಳು ಇದೀಗ ನಳನಳಿಸುತ್ತಿವೆ. ಕೃಷಿ ಭೂಮಿ ಹಚ್ಚಹಸಿರಿನಿಂದ ಕಂಗೂಳಿಸುತ್ತಿದೆ. ಬೆಳೆಗಳ ಕಟಾವು ಹಂತದವರೆಗೆ ಇದೇ ರೀತಿಯ ವಾತಾವರಣ ಇದ್ದರೆ ಈ ಬಾರಿ ಖಂಡಿತ ಉತ್ತಮ ಆದಾಯ ಕಾಣಬಹುದಾಗಿದೆ ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗೆ ಇದು ನೆರವಾಗುತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಬೆಳೆಗಳು ರೈತರ ಕೈಹಿಡಲಿವೆ.ಕೊಟ್ಟೂರು ಕೆರೆ ಜೀವಸೆಲೆ:
ಕೊಟ್ಟೂರು ಕೆರೆ ಭರ್ತಿಯಾಗಿರುವುದು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಸಮೀಪದ ಸರಿಸುಮಾರು 250ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೊಂಡಿರುವ ಬೆಳೆಗಳು ಉತ್ತಮವಾಗಿ ಬೆಳೆಯಲಾರಂಭಿಸಿವೆ. ಸುತ್ತಲಿನ ಗ್ರಾಮಗಳ ರೈತರ ಬೋರ್‌ವೆಲ್‌ಗಳಿಗೆ ಕೊಟ್ಟೂರು ಕೆರೆ ಜೀವ ಸೆಲೆಯಾಗಿದೆ.ನಿರಂತರ ಮಳೆಯಿಂದಾಗಿ ರೈತರ ಅನೇಕ ಕೃಷಿ ಭೂಮಿಗಳಲ್ಲಿ ಕೊರೆಸಲಾದ ಬೋರ್‌ವೇಲ್‌ಗಳಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಹೆಚ್ಚಾಗಿರುವುದು ಕಂಡು ಬರುತ್ತಿದೆ. ಇದರ ಪರಿಣಾಮ ರೈತರ ಬಿತ್ತನೆ ಬೆಳೆಗಳು ಉತ್ತಮವಾಗಿ ಬೆಳೆದು ಅವರ ನೆರವಿಗೆ ಈ ಬಾರಿ ಆದಾಯ ರೂಪದಲ್ಲಿ ಕೈಗೆ ತಲುಪುವ ನಿರೀಕ್ಷೆ ಇದೆ ಎಂದು ಕೃಷಿ ಸಹಾಯಕ ಅಧಿಕಾರಿ ಶಾಮ್ ಸುಂದರ್ ತಿಳಿಸಿದ್ದಾರೆ.