ಉತ್ತರ ಕನ್ನಡದ ೨೦ ಗ್ರಾಪಂನಲ್ಲಿ ಮಾರ್ಚ್ ಅಂತ್ಯದಲ್ಲೇ ನೀರಿನ ಸಮಸ್ಯೆ

| Published : Mar 31 2024, 02:07 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲೇ ನೀರಿನ ಅಭಾವ ಆರಂಭವಾಗಿದ್ದು, 20 ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಆರಂಭವಾಗಿದೆ.

ಕಾರವಾರ: ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲೇ ನೀರಿನ ಅಭಾವ ಆರಂಭವಾಗಿದ್ದು, 20 ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್, ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಆರಂಭವಾಗಿದೆ.

ಯಲ್ಲಾಪುರ, ಸಿದ್ದಾಪುರ, ಕಾರವಾರ ತಲಾ ಒಂದು, ಹಳಿಯಾಳ ೧೨, ಮುಂಡಗೋಡ ೫ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್, ಖಾಸಗಿ ಬೋರ್‌ವೆಲ್ ಮೂಲಕ ನೀರನ್ನು ಜನರಿಗೆ ನೀಡಲಾಗುತ್ತಿದೆ. ಯಲ್ಲಾಪುರ, ಸಿದ್ದಾಪುರ ಮಲೆನಾಡಿನ ತಾಲೂಕುಗಳಾದರೂ ಮಾರ್ಚ್ ಅಂತ್ಯದಲ್ಲೇ ನೀರಿನ ಅಭಾವಕ್ಕೆ ಒಳಗಾಗಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾಗದೇ ಇದ್ದರೆ ಮತ್ತಷ್ಟು ಗ್ರಾಪಂಗಳಲ್ಲಿ ಜೀವಜಲವನ್ನು ಟ್ಯಾಂಕರ್ ಮೂಲಕ ಒದಗಿಸಬೇಕಾಗುವ ಸಾಧ್ಯತೆಗಳಿವೆ.

ಸಿದ್ದಾಪುರ, ಯಲ್ಲಾಪುರ, ಕಾರವಾರದಲ್ಲಿ ಟ್ಯಾಂಕರ್ ಮೂಲಕ ಹಾಗೂ ಹಳಿಯಾಳ, ಮುಂಡಗೋಡಿನಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರನ್ನು ನೀಡಲಾಗುತ್ತಿದೆ. ಜಲ ಜೀವನ ಮಿಷನ್, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದರೂ ಟ್ಯಾಂಕರ್, ಬೋರ್‌ವೆಲ್ ಮೂಲಕ ನೀರು ಪೂರೈಕೆ ತಪ್ಪುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿತ ಕೂಡಾ ನೀರಿನ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆ. ನೀರಿನ ಸಮಸ್ಯೆ ಕೇವಲ ಮನುಷ್ಯರ ಮೇಲೆ ಮಾತ್ರ ಪರಿಣಾಮ ಬೀರದೇ ವನ್ಯಜೀವಿ, ಕೃಷಿ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕಾಡಿನಲ್ಲಿ ನೀರು ಸಿಗದೇ ವನ್ಯಜೀವಿಗಳು ನೀರನ್ನು ಅರಸಿ ನಾಡಿನತ್ತ ಬರುತ್ತಿವೆ. ಜಲ ಮೂಲಗಳು ಬತ್ತಲಾರಂಭಿಸಿದ್ದು, ಅಡಕೆ, ಬಾಳೆ ಒಳಗೊಂಡು ತೋಟಗಳಿಗೆ ನೀರುಣಿಸಲು ಸಾಧ್ಯವಾಗದೇ ಗಿಡ ಮರಗಳು ಒಣಗಲು ಆರಂಭಿಸಿವೆ. ಇದರಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯ ೧೩ ತಾಲೂಕುಗಳಲ್ಲಿ ಒಟ್ಟೂ ೨೨೯ ಗ್ರಾಪಂಗಳಿದ್ದು, ಏಪ್ರಿಲ್, ಮೇ ಅವಧಿಯಲ್ಲಿ ಮಳೆಯಾಗದೇ ಇದ್ದರೆ ೧೯೮ ಗ್ರಾಪಂಗಳ ವ್ಯಾಪ್ತಿಯಲ್ಲಿ ನೀರಿನ ತೊಂದರೆ ಉಂಟಾಗಬಹುದು ಎಂದು ಈಗಾಗಲೇ ಕಂದಾಯ ಇಲಾಖೆ ಅಂದಾಜಿಸಿದೆ. ನೀರು ಪೂರೈಕೆಗೆ ೧೯೩ ಬೋರ್‌ವೆಲ್‌ಗಳನ್ನು ಗುರುತಿಸಿಕೊಳ್ಳಲಾಗಿದೆ.ಬೋರ್‌ವೆಲ್‌ ನೀರು ಪೂರೈಕೆ: ಕಾರವಾರ ೪ ಟ್ಯಾಂಕರ್, ಯಲ್ಲಾಪುರ ೨, ಸಿದ್ದಾಪುರ ಒಂದು ಟ್ಯಾಂಕರ್, ಹಳಿಯಾಳ ೫೨ ಬೋರ್‌ವೆಲ್, ಮುಂಡಗೋಡ ೯ ಬೋರ್‌ವೆಲ್‌ಗಳ ಮೂಲಕ ನೀರನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕಾರವಾರ, ಸಿದ್ದಾಪುರ, ಯಲ್ಲಾಪುರ ತಲಾ ಎರಡು ಹಳ್ಳಿಗಳಲ್ಲಿ, ಹಳಿಯಾಳ ೨೩ ಹಳ್ಳಿ, ಮುಂಡಗೋಡ ೮ ಹಳ್ಳಿಗಳು ಹಾಲಿ ನೀರಿನ ತೊಂದರೆ ಅನುಭವಿಸುತ್ತಿವೆ. ಏಪ್ರಿಲ್ ತಿಂಗಳಲ್ಲಿ ೫೦೬, ಮೇ ತಿಂಗಳಲ್ಲಿ ೫೩೧ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹಳಿಯಾಳ ೧೦೯ ಗ್ರಾಮಗಳಿದ್ದರೆ, ಸಿದ್ದಾಪುರ ೯೭ ಗ್ರಾಮಗಳು ಪಟ್ಟಿಯಲ್ಲಿವೆ. ಉಳಿದ ತಾಲೂಕಿನಲ್ಲಿ ೫೦ಕ್ಕಿಂತ ಕಡಿಮೆ ಗ್ರಾಮಗಳಿವೆ.