ಸಾರಾಂಶ
ನೀರು ಪೂರೈಕೆ ಪೈಪ್ ಲೈನ್ ಸಮಸ್ಯೆ ಕಾರಣ ಸರಬರಾಜು ಸಂಪೂರ್ಣ ಬಂದ ಆಗಿದೆ. ವಾರ್ಡಿನ ಪಪಂ ಸದಸ್ಯರು ಕ್ರಮಕ್ಕೆ ಸೂಚಿಸಿದ್ದರೂ ಅಧಿಕಾರಿಗಳಿಂದ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕವಿತಾಳ
ಬೃಹತ್ ಕೆರೆ ನಿರ್ಮಿಸಿದ್ದರೂ ಪಟ್ಟಣದ ಕೆಲವು ವಾರ್ಡ್ ನೀರಿನ ಸಮಸ್ಯೆ ನೀಗಿಲ್ಲ. ಇಲ್ಲಿನ ಕೆಲವು ವಾರ್ಡ್ ಗಳಿಗೆ ಕಳೆದ ಮೂರು ದಿನಗಳಿಂದ ನೀರು ಸರಬರಾಜು ಸ್ಥಗಿತವಾಗಿದ್ದು ವಾರ್ಡ್ ಜನರು ವಿಶೇಷವಾಗಿ ಮಹಿಳೆಯರು ಮಕ್ಕಳು ನೀರಿಗಾಗಿ ಅಲೆಯುತ್ತಿದ್ದಾರೆ.1,9,12,13,14ನೇ ವಾರ್ಡ್‌ಳಿಗೆ ಕೊಳವೆಬಾವಿ ನೀರು ಪೂರೈಸುವ ಪೈಪ್‌ಗಳಲ್ಲಿ ಮರದ ಬೇರುಗಳು ಬೆಳೆದು ನೀರು ಸರಬರಾಜು ಬಂದ್ ಆಗಿದೆ, 1 ಮತ್ತು 13 ನೇ ವಾರ್ಡ್‌ಗಳಿಗೆ ಸಂಪೂರ್ಣ ಕೊಳವೆಬಾವಿ ನೀರನ್ನೇ ಸರಬರಾಜು ಮಾಡಲಾಗುತ್ತಿದ್ದು ಇದೀಗ ನೀರು ಪೂರೈಕೆ ಸಂಪೂರ್ಣ ಸ್ಥಗಿತವಾದ ಹಿನ್ನೆಲೆಯಲ್ಲಿ ವಾರ್ಡ್ ಜನರು ಕೊಡ ಹಿಡಿದುಕೊಂಡು ನೀರಿಗಾಗಿ ಅಲೆಯುವಂತಾಗಿದೆ. ಅದೇ ರೀತಿ 9, 12 ಹಾಗೂ 14ನೇ ಕೆಲವು ಓಣಿಗಳಿಗೆ ಕೆರೆ ನೀರಿನ ಜೊತೆಗೆ ಪ್ರತ್ಯೇಕವಾಗಿ ಇದೇ ಕೊಳವೆ ಬಾವಿ ನೀರು ಪೂರೈಸುತ್ತಿದ್ದು ಅಲ್ಲಿಯೂ ನೀರು ಸರಬರಾಜು ಸ್ಥಗಿತವಾಗಿ ಮಹಿಳೆಯರು ಬೇರೆ ಓಣಿಗಳಿಂದ ನೀರು ತರುವಂತಾಗಿದೆ.
ಮೂರು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ವಾರ್ಡಿನ ಸದಸ್ಯರು ಪೈಪ್ ದುರಸ್ತಿ ಮಾಡುವಂತೆ ಹೇಳಿದರೂ ಕ್ರಮವಾಗಿಲ್ಲ. ಎರಡು ಮೂರು ದಿನ ನೀರು ಇಲ್ಲದಿದ್ದರೆ ಏನಾಗುತ್ತದೆ. ನಾನು ಬಂದು ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ನೀವು ದುರಸ್ತಿಗೆ ಮುಂದಾದರೆ ನೀವೇ ಜವಾಬ್ದಾರಿ ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್ ನರಸಮ್ಮ ಹೇಳುತ್ತಿದ್ದಾರೆ. ಹೀಗಾಗಿ ದುರಸ್ತಿ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಅರೋಪಿಸಿದ್ದಾರೆ.ಪಟ್ಟಣ ಪಂಚಾಯಿತಿ ಇಂಜಿನಿಯರ್ ಮತ್ತು ಅಧಿಕಾರಿಗಳ ನಿರ್ಲಕ್ಷ ಸದಸ್ಯರ ಅಸಹಾಯಕತೆ ನಡುವೆ ವಾರ್ಡ್ ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ. ಹೊಲ, ಮನಿ ಕೆಲಸ ಬಿಟ್ಟು ಬೆಳಗ್ಗೆಯಿಂದ ನೀರಿಗಾಗಿ ಅಲೆಯುವಂತಾಗಿದೆ. ಪೈಪ್ ದುರಸ್ತಿ ಮಾಡುವ ಬಗ್ಗೆ ಅಧಿಕಾರಿಗಳು ಕಾಳಜಿ ತೋರಬೇಕು ಎಂದು ಮಹಿಳೆಯರು ಆಗ್ರಹಿಸಿದರು.
ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮೂರು ದಿನಗಳಿಂದ ಮಾಹಿತಿ ನೀಡುತ್ತಿದ್ದರೂ ತಾವು ಖುದ್ದಾಗಿ ಬಂದು ಪರಶೀಲಿಸಿ ದುರಸ್ತಿ ಮಾಡಿಸುವುದಾಗಿ ಹೇಳುತ್ತಿರುವ ಇಂಜಿನಿಯರ್, ಬೀದಿ ದೀಪ ಅಳವಡಿಸಲೂ ಸದಸ್ಯರಿಗೆ ಅಡ್ಡಿಯಾಗುತ್ತಿದ್ದಾರೆ, ಬೀದಿ ದೀಪ ಅಳವಡಿಸಲು 15 ದಿನಗಳು ಬೇಕಾಗುತ್ತವೆ ಎಂದು ಹೇಳುತ್ತಿದ್ದಾರೆ, ವಾರ್ಡಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರೆ ಸದಸ್ಯರ ಮಾತಿಗೆ ಮನ್ನಣೆ ಇಲ್ಲದಂತಾಗಿದೆ. ಹೀಗಾಗಿ ಕರ್ತವ್ಯಲೋಪ ಎಸಗುತ್ತಿರುವ ಎಂಜಿನಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಪಂ ಸದಸ್ಯರಾದ ಯಲ್ಲಪ್ಪ ಮಾಡಗಿರಿ, ಲಿಂಗರಾಜ ಕಂದಗಲ್, ರಮೇಶ ನಗನೂರು, ಎಂ.ರಾಘವೇಂದ್ರ ಶೆಟ್ಟಿ, ರಾಜೇಶ್ವರಿ ತಿಪ್ಪಯ್ಯಸ್ವಾಮಿ, ಹುಲಗವ್ವ ಮೌನೇಶ, ಗೌರಮ್ಮ ಮೌನೇಶ ಇತರರು ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು, ಪಪಂ ಆಡಳಿತಾಧಿಕಾರಿ ಸಿರವಾರ ತಹಸೀಲ್ದಾರರು ಮತ್ತು ಮುಖ್ಯಾಧಿಕಾರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.