15 ದಿನಕ್ಕೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ: ಜಿಪಂ ಸಿಇಒ ಸೂಚನೆ

| Published : Aug 17 2025, 04:02 AM IST

ಸಾರಾಂಶ

ಮಂಗಳೂರು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಭೆ ನೆರವೇರಿತು.

ಮಂಗಳೂರು: ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ ನಡೆಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಸೂಚಿಸಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಪ್ರತಿ ಅಂಗನವಾಡಿ ಮತ್ತು ಶಾಲೆಗಳ ಕುಡಿಯುವ ನೀರಿನ ಘಟಕವನ್ನು ಆದ್ಯತೆಯಲ್ಲಿ ತಪಾಸಣೆ ನಡೆಸಬೇಕು. ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕರು ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇದರ ಉಸ್ತುವಾರಿ ವಹಿಸಬೇಕು. ಅದೇ ರೀತಿ ಅಂಗನವಾಡಿ ಮತ್ತು ಶಾಲೆಗಳ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ಗ್ರಾಮ ಪಂಚಾಯ್ತಿಗಳ ವಾಟರ್ ಮ್ಯಾನ್‌ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು. ಈ ಕುರಿತ ಜಿಪಿಎಸ್ ಫೋಟೊ ತೆಗೆದು ಪ್ರತಿ ಶಾಲೆಯಲ್ಲಿ ಇಟ್ಟುಕೊಂಡು ತಪಾಸಣೆ ವೇಳೆ ಪರಿಶೀಲಿಸಬೇಕು ಎಂದು ಅವರು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ 55 ಕಾಮಗಾರಿಗಳ ಯೋಜನಾ ವೆಚ್ಚವು ಟೆಂಡರ್‌ನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಳವಾಗಿರುವ ಬಗ್ಗೆ ಅನುಮೋದನೆ ನೀಡುವ ಪೂರ್ವಭಾವಿಯಾಗಿ ಕಾಮಗಾರಿಗಳ ವಿವರವನ್ನು ತಾಲೂಕುವಾರು ಪರಿಶೀಲಿಸಲು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಕಾರ್ಯಪಾಲಕ ಅಭಿಯಂತರ ಜೈಪ್ರಕಾಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಸಣ್ಣ ನೀರಾವರಿ ಇಲಾಖೆ ಎಇಇ ತಾಜುದ್ದೀನ್ ಉಬೈದ್ ಮತ್ತಿತರರು ಇದ್ದರು.