ಜಲಾಶಯದಿಂದ ನೀರು ಬಿಡುಗಡೆ ಅಧಿಕ

| Published : Jul 29 2024, 12:59 AM IST

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲೇ ಇರುವುದರಿಂದ ಸಹಜವಾಗಿ ಜಲಾಶಯದಿಂದ ನೀರು ಬಿಡುಗಡೆ ಪ್ರಮಾಣವೂ ಅಧಿಕವಾಗುತ್ತಲೇ ಇದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲೇ ಇರುವುದರಿಂದ ಸಹಜವಾಗಿ ಜಲಾಶಯದಿಂದ ನೀರು ಬಿಡುಗಡೆ ಪ್ರಮಾಣವೂ ಅಧಿಕವಾಗುತ್ತಲೇ ಇದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಜಲಾಶಯದಿಂದ ಬರೋಬ್ಬರಿ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿಯುದ್ದಕ್ಕೂ ಪ್ರವಾಹ ಮತ್ತಷ್ಟು ಹೆಚ್ಚಳವಾಗುತ್ತಲೇ ಇದೆ.

ಹುಲಿಗೆಮ್ಮ ದೇವಸ್ಥಾನದ ಬಳಿ ಪ್ರವಾಹದ ಮಟ್ಟ ಮೀರಿ ನದಿಯಲ್ಲಿ ನೀರು ಹರಿಯುತ್ತಿದ್ದು, ಎರಡು ಬದಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನು ಆನೆಗೊಂದಿ ಬಳಿಯೂ ನದಿಯಲ್ಲಿ ನೀರು ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನವವೃಂದಾವನೆ ಗಡ್ಡೆಗೆ ಹೋಗುವ ಮಾರ್ಗ ಬಂದ್ ಆಗಿದೆ.

ಗಂಗಾವತಿ ಮತ್ತು ಬಳ್ಳಾರಿ ನಡುವೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಎರಡು ಬದಿಯಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿ, ಯಾವುದೇ ವಾಹನ ಸಂಚಾರ ಮಾಡದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಈ ರಸ್ತೆಯಲ್ಲಿ ಸಂಚಾರ ಇಲ್ಲದಿರುವುದರಿಂದ ಹತ್ತಾರು ಕಿಮೀ ಸುತ್ತು ಹಾಕಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಳುಗಿದ ದೇವಸ್ಥಾನ:ಕಾರಟಗಿ ತಾಲೂಕಿನ ಬೆನ್ನೂರು ಬಳಿ ಇರುವ ಶ್ರೀ ಹೊಳೆ ಬಸವೇಶ್ವರ ದೇವಸ್ಥಾನ ಬಹುತೇಕ ಮುಳುಗಡೆಯಾಗಿದ್ದು, ಕೇವಲ ಗೋಪುರದ ಕಳಸ ಮಾತ್ರ ಕಾಣುತ್ತಿದೆ. ಉಳಿದಂತೆ ಬಹುತೇಕ ಭಾಗ ಮುಳುಗಿದೆ.

ನದಿಯಲ್ಲಿ ಒಂದುವರೆ ಲಕ್ಷ ಕ್ಯುಸೆಕ್ ನೀರು ಬಂದಾಗಲೆಲ್ಲ ಈ ದೇವಸ್ಥಾನ ಮುಳುಗಡೆಯಾಗುತ್ತದೆ. ಈಗ ಬೆನ್ನೂರು ಬಳಿ ನದಿಯಲ್ಲಿನ ಪ್ರವಾಹದಿಂದಾಗಿ ರೈತರ ಗದ್ದೆಗಳಿಗೂ ನೀರು ನುಗ್ಗಿದೆ. ಒಂದೆರಡು ದಿನಗಳಲ್ಲಿ ಪ್ರವಾಹ ತಗ್ಗಿದರೇ ಬೆಳೆ ಹಾನಿಯಾಗುವುದಿಲ್ಲ. ಹಾಗೊಂದು ವೇಳ ತಗ್ಗದೆ ಇದ್ದರೇ ಬೆಳೆ ಹಾನಿಯಾಗುತ್ತದೆ ಎನ್ನುತ್ತಾರೆ ರೈತರು.

ದೇವಸ್ಥಾನದ ಭಕ್ತರಿಗೆ ಸೂಚನೆ:

ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಈಗ ಪ್ರವಾಹ ಇರುವುದರಿಂದ ನದಿಯ ಬಳಿಗೆ ಯಾರು ಹೋಗದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದರೂ ಸಹ ಕೆಲವರು ದೂರದಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲ ಮಕ್ಕಳು ನದಿಯಲ್ಲಿ ಹುಚ್ಚಾಟ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.