ಉತ್ತರ ಕನ್ನಡದಲ್ಲಿ ಮುಂದುವರಿದ ಮಳೆಯ ಅಬ್ಬರ, ಲಿಂಗನಮಕ್ಕಿ, ಕದ್ರಾ ಡ್ಯಾಂನಿಂದ ನೀರು ಹೊರಕ್ಕೆ

| Published : Aug 20 2025, 02:00 AM IST

ಉತ್ತರ ಕನ್ನಡದಲ್ಲಿ ಮುಂದುವರಿದ ಮಳೆಯ ಅಬ್ಬರ, ಲಿಂಗನಮಕ್ಕಿ, ಕದ್ರಾ ಡ್ಯಾಂನಿಂದ ನೀರು ಹೊರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕದ್ರಾ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ಶರಾವತಿ ನದಿ ತೀರದಲ್ಲಿ ಸುರಕ್ಷತಾ ಕ್ರಮವಾಗಿ 3 ಕಾಳಜಿ ಕೇಂದ್ರಗಳನ್ನು ತೆರೆದು 101 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕದ್ರಾ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ಶರಾವತಿ ನದಿ ತೀರದಲ್ಲಿ ಸುರಕ್ಷತಾ ಕ್ರಮವಾಗಿ 3 ಕಾಳಜಿ ಕೇಂದ್ರಗಳನ್ನು ತೆರೆದು 101 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಜಿಲ್ಲೆಯ ವಿವಿಧೆಡೆ 18 ಮನೆಗಳಿಗೆ ಹಾನಿ ಉಂಟಾಗಿದೆ.

ಲಿಂಗನಮಕ್ಕಿ ಜಲಾಶಯದಿಂದ 15 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಗೇರುಸೊಪ್ಪಾ ಸಮೀಪದ ಹೆರಂಗಡಿ, ಸಂಶಿ. ಸರಳಗಿ ಪ್ರದೇಶದ ತೀರ ಪ್ರದೇಶದ 101ರಷ್ಟು ಜನರನ್ನು ಹೆರಂಗಡಿ, ಸಂಶಿ ಹಾಗೂ ಸರಳಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಸದ್ಯಕ್ಕೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಲ್ಲಿ ಶರಾವತಿ ನದಿಯುದ್ದಕ್ಕೂ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ಕದ್ರಾ ಜಲಾಶಯದ 6 ಗೇಟ್‌ಗಳ ಮೂಲಕ 51 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ಕಾಳಿ ನದಿ ತೀರದಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ.

ಮುಂಡಗೋಡದಲ್ಲಿ ಸತತ ಮಳೆಯಿಂದ ಸನವಳ್ಳಿ ಜಲಾಶಯ ಭರ್ತಿಯಾಗಿದ್ದರೆ, ಹಳಿಯಾಳದಲ್ಲಿ ನಿರಂತರ ಮಳೆಯಿಂದ ತಟ್ಟಿಹಳ್ಳ ಜಲಾಶಯ ಮೈದುಂಬಿಕೊಂಡಿದೆ.

ಕರಾವಳಿಯಲ್ಲಿ ಸೋಮವಾರಕ್ಕಿಂತ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಆಗಾಗ ಭಾರಿ ಮಳೆ ಬೀಳುತ್ತಿದೆ. ಜೋಯಿಡಾ, ಸಿದ್ಧಾಪುರ, ಶಿರಸಿ, ಮುಂಡಗೋಡ, ಯಲ್ಲಾಪುರಗಳಲ್ಲೂ ಆಗಾಗ ಭಾರಿ ಮಳೆಯಾಗುತ್ತಿದೆ. ಕರಾವಳಿಗಿಂತ ಘಟ್ಟದ ಮೇಲಿನ ತಾಲೂಕುಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

ಮಳೆ ವಿವರ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ಪ್ರಮಾಣ ಮಿ.ಮೀ.ಗಳಲ್ಲಿ ಹೀಗಿದೆ.

ಅಂಕೋಲಾದಲ್ಲಿ 54.9 ಮಿಮೀ, ಭಟ್ಕಳದಲ್ಲಿ 68.9, ಹಳಿಯಾಳ 54.4, ಹೊನ್ನಾವರ, 56.2, ಕಾರವಾರ 75.1, ಕುಮಟಾ 70.1, ಮುಂಡಗೋಡ 17.9, ಸಿದ್ದಾಪುರ 61.4, ಶಿರಸಿ 48.3, ಸೂಪಾ 90.6, ಯಲ್ಲಾಪುರ 40.4, ದಾಂಡೇಲಿಯಲ್ಲಿ 68.5 ಮಿಲಿ ಮೀಟರ್ ಮಳೆ ಸುರಿದಿದೆ.

ಈ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಒಟ್ಟೂ 18 ಮನೆಗಳಿಗೆ ಹಾನಿ ಉಂಟಾಗಿದೆ.

ಭಾರಿ ಮಳೆ, 6 ತಾಲೂಕುಗಳಿಗೆ ರಜೆ:

ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಘಟ್ಟದ ಮೇಲಿನ 6 ತಾಲೂಕುಗಳ ಶಾಲೆಗಳಿಗೆ ಆ. 20ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಬುಧವಾರ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ, ದಾಂಡೇಲಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.