. ಜಲಾಶಯದ ಗೇಟ್‌ಗಳ ಅಳವಡಿಕೆಗೆ ಜಲಾಶಯದ ಮಟ್ಟ 1613 ಅಡಿಗೆ ತಲುಪಬೇಕಿದೆ. ಹಾಗಾಗಿ, ಈಗ ಆಂಧ್ರಪ್ರದೇಶದ ಕೋಟಾದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಕೆಗಾಗಿ ನದಿಗೆ 5000 ಕ್ಯುಸೆಕ್ ನೀರು ಮಂಗಳವಾರ ಹರಿಬಿಡಲಾಗಿದೆ. ಜಲಾಶಯದ ಗೇಟ್‌ಗಳ ಅಳವಡಿಕೆಗೆ ಜಲಾಶಯದ ಮಟ್ಟ 1613 ಅಡಿಗೆ ತಲುಪಬೇಕಿದೆ. ಹಾಗಾಗಿ, ಈಗ ಆಂಧ್ರಪ್ರದೇಶದ ಕೋಟಾದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಜಲಾಶಯದ ನೀರನ್ನು ನದಿಗೆ ಹರಿಬಿಡುವ ಸಂಬಂಧ ತ್ರಿವಳಿ ರಾಜ್ಯಗಳ ಅಧೀಕ್ಷಕ ಎಂಜಿನಿಯರ್‌ಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ನಿರ್ಣಯದಂತೆ ಹತ್ತು ದಿನಗಳವರೆಗೆ ನದಿಗೆ ನೀರು ಹರಿಸಲಾಗುತ್ತಿದೆ. ಜಲಾಶಯದ ನೀರಿನ ಸಂಗ್ರಹ 43 ಟಿಎಂಸಿಗೆ ಇಳಿದರೆ, ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಸುಲಭವಾಗಲಿದೆ ಎಂಬ ಲೆಕ್ಕಾಚಾರದೊಂದಿಗೆ ಈಗ ನದಿಗೆ ನೀರು ಹರಿಸಲಾಗುತ್ತಿದೆ. ಇದಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಧೀಕ್ಷಕ ಎಂಜಿನಿಯರ್ ಗಳ ಸಭೆಯಲ್ಲಿ ಸಮ್ಮತಿ ಪಡೆಯಲಾಗಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.ಜಲಾಶಯದಲ್ಲಿ ಈಗ 1620.94 ಅಡಿ (63.998 ಟಿಎಂಸಿ) ನೀರು ಸಂಗ್ರಹ ಇದೆ. ಇನ್ನೂ ಇಪ್ಪತ್ತು ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಈ ನೀರು ಖಾಲಿ ಮಾಡಿದರೆ, ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆಗೆ ಅನುಕೂಲ ಆಗಲಿದೆ. ಹಾಗಾಗಿ ಈಗ ಕಾಲುವೆಗಳಿಂದ ನಿತ್ಯ 9455 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ. ಜೊತೆಗೆ ನದಿಗೆ 5000 ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ನೀರು ಬೇಗನೆ ಖಾಲಿ ಆಗಲಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದರು.
ತುಂಗಭದ್ರಾ ಜಲಾಶಯದ 18ನೇ ಹಳೇ ಕ್ರಸ್ಟ್ ಗೇಟ್‌ನ ಒಂದು ಭಾಗ ತುಂಡರಿಸಲಾಗಿದೆ. ಈಗ ಮತ್ತೆ 20ನೇ ಕ್ರಸ್ಟ್ ಗೇಟ್‌ನ ಒಂದು ಭಾಗ ತುಂಡರಿಸುವ ಕಾರ್ಯವನ್ನು ಕಾರ್ಮಿಕರು ಮಂಗಳವಾರ ಆರಂಭಿಸಿದ್ದಾರೆ. ಜಲಾಶಯದಲ್ಲಿ ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆಗಾಗಿ ತಯಾರಿ ಭರದಿಂದ ಸಾಗಿದೆ.