ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ನೂತನ ಕೆರೆ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ಹಾಗೂ ಕೃಷಿ ಹೊಂಡಗಳ ನಿರ್ಮಾಣ ಹಾಗೂ ನಿರ್ವಹಣೆ ಸೇರಿದಂತೆ ಜಲಮರುಪೂರಣ ಕಾರ್ಯ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಅಟಲ್ ಭೂ ಜಲ ಯೋಜನೆ ಲೆಕ್ಕ ಪರಿಶೋಧನಾ ಸಮಿತಿ ಅಧ್ಯಕ್ಷ ಪಿ.ಬಿ.ಚಂದ್ರಶೇಖರ್ ತಿಳಿಸಿದರು.ತಾಲೂಕಿನ ದೊಡ್ಡಗಟ್ಟಿಗನಬ್ಬೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಔಟ್ ರೀಚ್ ಸಂಸ್ಥೆ ಆಯೋಜಿಸಿದ್ದ ಜಲ ಸಂರಕ್ಷಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀರು ಉಳಿಸುವ ಪ್ರಕ್ರಿಯೆ, ಸಮಸ್ಯೆ ಉಂಟಾದ ಸಂದರ್ಭಕ್ಕೆ ಮಾತ್ರ ಸೀಮಿತವಾಗಬಾರದು. ಬಳಸುವ ಪ್ರತಿ ಕ್ಷಣವೂ ಅದರ ಮಹತ್ವದ ಅರಿವಿರಬೇಕು. ಆಗ ಮಾತ್ರ ಪ್ರಕೃತಿಯ ಕೊಡುಗೆ ನೀರನ್ನು ಉಳಿಸಲು ಸಾಧ್ಯ. ಮುಂದಿನ ಪೀಳಿಗೆಗಾಗಿ ಅಂತರ್ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ನೀರಿನ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಮ ವಹಿಸಬೇಕು. ಮನೆಗಳ ಬಳಿ ಇಂಗುಗುಂಡಿ, ಮಳೆನೀರು ಕೊಯ್ಲು ಹಾಗೂ ತೋಟಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಪೋಷಕರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.
ಪ್ರತಿಯೊಬ್ಬರಿಗೂ ನೀರಿನ ಮಹತ್ವ ತಿಳಿದಿರಬೇಕು. ನೀರನ್ನು ಮಿತವಾಗಿ ಬಳಸಬೇಕು ಎಂಬುದರ ಬಗ್ಗೆ ಅರಿವಿರಬೇಕು. 2 ವರ್ಷದ ಮಗುವಿನಿಂದ ವೃದ್ಧರವರೆಗೂ ನೀರನ್ನು ಅನಾವಶ್ಯಕವಾಗಿ ಪೋಲು ಮಾಡದಂತೆ ತಿಳಿವಳಿಕೆ ಮೂಡಿಸಬೇಕು. ಪ್ರತಿಯೊಬ್ಬರೂ ಜಲ ಸಾಕ್ಷರರಾಗಬೇಕು. ಓಡುವ ನೀರನ್ನು, ನಡೆಯುವಂತೆ, ನಡೆಯುವುದನ್ನು ನಿಲ್ಲುವಂತೆ ಮಾಡುವ ಮೂಲಕ ನೀರನ್ನು ಭೂಮಿಗೆ ಇಂಗುವಂತೆ ಮಾಡಿ ಅಂತರ್ಜಲ ಸಂರಕ್ಷಣೆ ಮಾಡಬೇಕು. ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಮಳೆ ನೀರನ್ನು ಸದ್ಬಳಕೆ ಮಾಡುವ ಮೂಲಕ ಜಲ ಕ್ಷಾಮ ತಲೆದೋರದಂತೆ ಅತ್ಯಂತ ಜಾಗರೂಕತೆಯಿಂದ ನೀರನ್ನು ಸಂರಕ್ಷಿಸಬೇಕು. ಅಕಾಲಿಕ ಮಳೆ ಬಂದಾಗ ಅದನ್ನು ಹಿಡಿದಿಡಲು ಕ್ರಮ ವಹಿಸಿ ಸರಳವಾಗಿ ಮಳೆ ಕೊಯ್ಲು ಅಳವಡಿಸಿಕೊಂಡರೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾ ಶೆಣೈ, ಶಾಲಾ ಸಹ ಶಿಕ್ಷಕರು, ಔಟ್ ರೀಚ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.