ಸಾರಾಂಶ
ಕಲಬುರಗಿ : ಮಹಾರಾಷ್ಟ್ರ ರಾಜ್ಯದಲ್ಲಿರುವ ಜಲಾನಯನ ಪ್ರದೇಶದಲ್ಲಿ ಒಂದೇ ಸವನೆ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜೀವನದಿ ಭೀಮೆಗೆ ಹರಿದು ಬರುತ್ತಿರುವ ನೀರಿನ ಒಳ ಹರಿವು ಏಕಾಏಕಿ ಹೆಚ್ಚಾಗಿರೋದರಿಂದ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಭೀಮಾ ನದಿ ಉಗಮ ಸ್ಥಾನವಾಗಿರುವ ಮಹಾರಾಷ್ಟ್ರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಭೀಮೇಶ್ವರ ಬೆಟ್ಟದ ಸುತ್ತಮುತ್ತ ನಿರಂತರ ಮಳೆ ಸುರಿಯುತ್ತಿದ್ದು, ಉಜನಿ ಹಾಗೂ ವೀರ ಭಟ್ಕರ್ ಜಲಾಶಯಗಳು ಭರ್ತಿಯಾಗಿವೆ.
ಆ.4ರಂದು ಮಹಾರಾಷ್ಟ್ರ ಸರ್ಕಾರ ಉಜನಿ ಜಲಾಶಯದಿಂದ 1 ಲಕ್ಷ ಕ್ಯುಸೆಕ್, ವೀರ ಭಟ್ಕರ್ ಜಲಾಶಯದಿಂದ 41,700 ಕ್ಯುಸೆಕ್ ಸೇರಿದಂತೆ ಒಟ್ಟು 1,21,700 ಕ್ಯುಸೆಕ್ ನೀರು ಭೀಮಾ ನದಿಗೆ ಹರಿ ಬಿಡುತ್ತಿದೆ.
ಇದರಿಂದಾಗಿ ಭೀಮಾನದಿ ತೀರದಲ್ಲಿರುವ ಜಿಲ್ಲೆಯ ಅಫಜಲ್ಪುರ, ಕಲಬುರಗಿ, ಜೇವರ್ಗಿ ತಾಲೂಕುಗಳ 70 ಗ್ರಾಪಂ ವ್ಯಾಪ್ತಿಯಲ್ಲಿ ಬರುವ 185 ಹಳ್ಳಿಗಳಿಗೆ ನೆರೆ ಭೀತಿ ಆವರಿಸಿದೆ. ಉಭಯ ಜಲಾಶಯಗಳಿಂದ ಹರಿಬಿಟ್ಟಿರುವ ನೀರಿನ ಪ್ರಮಾಣ ಹೆಚ್ಚಾಗಿರೋದರಿಂದ ಭೀಮೆ ಜಿಲ್ಲೆಯನ್ನು ಪ್ರವೇಶಿಸಿವು ಅಫಜಲ್ಪುರ ತಾಲೂಕಿನ ಶೇಷಗಿರಿವಾಡಿ, ಮಣ್ಣೂರ, ಕುಡಿಗನೂರ್, ಶಿವೂರ ಸೇರಿದಂತೆ ಹಲವಾರು ಹಳ್ಳಿಗಳಿಗೆ ನೆರೆ ಕಾಡಲಿದೆ.
ಸೊನ್ನ ಜಲಾಶಯ ಒಳಹರಿವು ಹೆಚ್ಚಳ: ಅಫಜಲ್ಪುರ ಬಳಿಯ ಸೊನ್ನ ಭೀಮಾ ಅಣೆಕಟ್ಟೆಗೂ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಆ.5ರ ಬೆಳಗಿನ 10 ಗಂಟೆಯ ಪ್ರಕಾರ ಜಲಾಶಯಕ್ಕೆ 24,305 ಕ್ಯುಸೆಕ್ ನೀರಿನ ಒಳ ಹರಿವಿದ್ದು, ಇಲ್ಲಿಂದ 11 ಗೇಟ್ ತೆರೆದು 33,000 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.
ಅತೀ ಹೆಚ್ಚು ನೀರು ಬಿಡುವ ಸಾಧ್ಯತೆ: ಭೀಮಾನದಿಗೆ ಅಡ್ಡಲಾಗಿರುವ ಉಜನಿ ಜಲಾಶಯ ಇಂದಿನ ಮಟ್ಟಿಗೆ ಶೇ.90ರಷ್ಟು ಭರ್ತಿಯಾಗಿದ್ದು ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಬಿಡುವ ಸಾಧ್ಯತೆಗಳು ಹೆಚ್ಚಾಗಿವೆ. ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ನದಿ ಪಾತ್ರದ ಮೇಲಿನ ಅಣೆಕಟ್ಟೆಗಳಿಂದ ಹರಿದು ಬರುವ ನೀರಿನ ಪ್ರಮಾಣ ಸರಿದೂಗಿಸಿಕೊಂಡು ಲೆಕ್ಕಹಾಕಿ ನೀರನ್ನು ಹೊರಗೆ ಬಿಡಲಾಗುತ್ತದೆ. ನೀರು ಹೊರಬಿಡುವ ಪ್ರಮಾಣ ಹೆಚ್ಚುವ ಸಾಧ್ಯತೆಗಳಿವೆ. ನದಿ ತೀರದ ಗ್ರಾಮಗಳ ಜನ ವಸತಿ, ಪಶು ಸಂಪತ್ತಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಮ್ಮ ಗಮನಕ್ಕೆ ವಿಷಯ ತರಲಾಗಿದೆ ಎಂದು ಕಲಬುರಗಿ, ವಿಯಪುರ, ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಉಜನಿ ಜಲಾಶಯದ ನಿರ್ವಹಣೆ ವಿಭಾಗದ ಇಇ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಇತ್ತ ಕೃಷ್ಣಾ ನದಿಯೂ ತುಂಬಿ ಹರಿಯುತ್ತಿದೆ, ಕೃಷ್ಣೆಯ ಉನದಿ ಭೀಮೆಗೆ ಒಳ ಹರಿವು ಹೆಚ್ಚಾದಲ್ಲಿ ಪ್ರವಾಹದ ಆತಂಕ ಎದುರಾಗೋದು ನಿಶ್ಚಿತ ಎನ್ನಲಾಗುತ್ತಿದೆ.
ಕಲಬುರಗಿಯಲ್ಲಿ ಅಧಿಕಾರಿಗಳೊಂದಿಗೆ ಡಿಸಿ ತುರ್ತು ಸಭೆ: ಭೀಮಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಕಾಡುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಜಿಲ್ಲೆಯಲ್ಲಿ ನೆರೆ ಹಾವಳಿಗೆ ಸಂಭವನೀಯವಾಗಿ ತುತ್ತಾಗಲಿರುವ 70 ಗ್ರಾಪಂ ವ್ಯಾಪ್ತಿಯ 158 ಗ್ರಾಮಗಳ ಮೇಲೆ ನಿರಂತರ ನಿಗಾ ಇಡಲು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ಅಧಿಕಾರಿಗಳಿಗೆ ನೀಡಿದ್ದಾರೆ.
ಭೀಮಾ ನೆರೆಯಿಂದಾಗಿ ನೇರವಾಗಿ 40,731 ಜನರು ಇದಕ್ಕೆ ಭಾದಿತರಾಗಲಿದ್ದಾರೆ. ಈ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಮತ್ತು ಸಾರ್ವಜನಿಕರಿಗೆ ನೆರೆ ಹಾವಳಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ತಿಳಿ ಹೇಳಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮೂರು ದಿನದಲ್ಲಿ ಗ್ರಾಮ ಸಭೆ ಮಾಡಿ: ಅಫಜಲ್ಪುರ ಸೇರಿದಂತೆ ನದಿ ಪಾತ್ರದಲ್ಲಿರುವ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮುಂದಿನ 3 ದಿನದಲ್ಲಿ ಗ್ರಾಮ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ತೆಗೆದುಕೊಳ್ಳಬೇಕಾದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್‌ಗೆ ಡಿ.ಸಿ. ಸೂಚನೆ ನೀಡಿದರು. ನೆರೆ ಹಾವಳಿಯಿಂದ ಯಾವುದೇ ಮಾನವ, ಪ್ರಾಣಿ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನದಿ ಪಾತ್ರದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಬೇಕು. ಬೆಳಕಿನ ವ್ಯವಸ್ಥೆ ಮಾಡಿ ಎಂದರು.