ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ / ಹರಿಹರ
ದುಗ್ಗಮ್ಮನ ಜಾತ್ರೆ ಹೊತ್ತಲ್ಲೇ ಮಹಾನಗರದ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೀವ್ರ ವ್ಯತ್ಯಯವಾಗಿದ್ದು, ಪಾಲಿಕೆ ಆಡಳಿತ ಪಕ್ಷದ ಬೇಜವಾಬ್ದಾರಿಯಿಂದ ಜನರು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಅಸಮಾಧಾನ ಹೊರ ಹಾಕಿದ್ದಾರೆ.ಹರಿಹರ ತಾಲೂಕು ರಾಜನಹಳ್ಳಿ ಸಮೀಪದ ದಾವಣಗೆರೆ ನೀರು ಸರಬರಾಜು ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯದಿಂದಾಗಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹೊತ್ತಲ್ಲೇ ನೀರಿನ ಸಮಸ್ಯೆ ಉಲ್ಬಣಿಸುವಂತಾಗಿದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು 2 ತಿಂಗಳ ಮುನ್ನವೇ ಕುಡಿಯುವ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಜಿಲ್ಲಾ ಕೇಂದ್ರದ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಸಂಗ್ರಹಿಸಬೇ ಕಾದ ಪಾಲಿಕೆ ಆಡಳಿತ ಪಕ್ಷವು ಕಣ್ಣು ಮುಚ್ಚಿ ಕುಳಿತ ಪರಿಣಾಮ ಮಹಾ ಜನತೆ ಈಗ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ದೂರಿದರು.ಮಹಾ ನಗರಕ್ಕೆ ನೀರು ಪೂರೈಸುವ ನೀರು ಸಂಗ್ರಹಾಗಾರ ಕೆರೆಗಳು ಈಗಾಲೇ ಖಾಲಿಯಾಗಿವೆ. ಪ್ರತಿದಿನ ಕನಿಷ್ಟ ಅವಶ್ಯಕತೆ ಯ ನೀರನ್ನೂ ಪೂರೈಸಲಾಗದ ಸ್ಥಿತಿ ಇದೆ. ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ಕೆರೆಯೂ ಕನಿಷ್ಟ ನೀರಿನ ಮಟ್ಟ ತಲುಪಿ, ಈಗಾಗಲೇ ಬರಿದಾಗಿವೆ. ಕಳೆದ ಜನವರಿಯಲ್ಲೇ ಜಿಲ್ಲಾಡಳಿತಕ್ಕೆ ಭದ್ರಾ ನೀರನ್ನು ಹರಿಸಿ, ಬೇಸಿಗೆಗೆ ಅಗತ್ಯ ಕುಡಿಯುವ
ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು.ಪಾಲಿಕೆ ಸಾಮಾನ್ಯ ಸಭೆಯಲ್ಲೂ ದುಗ್ಗಮ್ಮನ ಜಾತ್ರೆ ಹಾಗೂ ಬೇಸಿಗೆಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಜನರ ಮೂಲಭೂತ ಸಮಸ್ಯೆಗಳಿಗೆ ಕಿವಿಗೊಡಬೇಕಾಗಿದ್ದ ಕಾಂಗ್ರೆಸ್ ಪಕ್ಷವು ಆಡಳಿತ ಅಧಿಕಾರದ ಮಜಾವಾದಿತನ ಪ್ರದರ್ಶಿಸುತ್ತಾ, ಜನರಿಗೆ ಬರದ ಗ್ಯಾರಂಟಿ ನೀಡಿದೆ. ಕನಿಷ್ಟ ಕುಡಿಯುವ ನೀರನ್ನು ಕೊಡದೇ, ಕಾಂಗ್ರೆಸ್ ಪಕ್ಷವು ಜನರ ಮನೆಗಳಲ್ಲಿ ನೀರಿನ ಕೊಡಗಳು ಬರಿದಾಗಲಿವೆಯೆಂಬುದನ್ನು ಖಚಿತಪಡಿಸಿದೆ ಎಂದು ಅವರು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತವು ತಕ್ಷಣವೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ, ಮುಂದಿನ 45 ದಿನಗಳಿಗೆ ಅವಶ್ಯಕ ನೀರನ್ನು ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು 2 ದಿನಗಳಲ್ಲಿ ನೀರಿನ ವ್ಯತ್ಯಯ ಉಂಟಾದ ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಪೂರೈಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಪಾಲಿಕೆ, ಜಿಲ್ಲಾಡಳಿತ ನೀರು ಪೂರೈಸಲು ವಿಫಲವಾದರೆ ತೀವ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.ಉಪ ಮೇಯರ್ ಯಶೋಧ ಯೋಗೇಶ, ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಆರ್.ಶಿವಾನಂದ, ಎಲ್.ಡಿ.ಗೋಣೆಪ್ಪ, ಕೆ.ಎಂ.ವೀರೇಶ, ಶಾಂತಕುಮಾರ ಸೋಗಿ, ಆರ್.ಎಲ್. ಶಿವಪ್ರಕಾಶ, ಬಿಜೆಪಿ ಮುಖಂಡರು, ಸದಸ್ಯರು ರಾಜನಹಳ್ಳಿ ಗ್ರಾಮದ ನೀರು ಸರಬರಾಜು ಕೇಂದ್ರದ ವಾಸ್ತವ ಸ್ಥಿತಿ ಪರಿಶೀಲಿಸಿದರು. ಟ್ಯಾಂಕರ್‌ನಿಂದ ನೀರು ಪೂರೈಕೆಗೆ ನಗರಸಭಾ ಸದಸ್ಯ ಖಲಂದರ್ ಒತ್ತಾಯಹರಿಹರ: ನಗರದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ನಗರಸಭಾ ಸದಸ್ಯ ದಾದಾ ಖಲಂದರ್ ಖಾಲಿ ಕೊಡಗಳೊಂದಿಗೆ ನಗರಸಭೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಪ್ಲಾಸ್ಟಿಕ್ ಬಿಂದಿಗೆಗಳೊಂದಿಗೆ ನಗರಸಭೆಗೆ ಆಗಮಿಸಿ ಪೌರಾಯುಕ್ತರ ಕೊಠಡಿ ಮುಂದೆ ಕುಳಿತು ನಗರಸಭಾ ಆಡಳಿತ ಅಧಿಕಾರಿಯಾದ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಅವರು, ಬರಗಾಲದ ಪರಿಣಾಮ ತುಂಗಭದ್ರ ನದಿಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆಯಾಗಿ ಜಲಸಿರಿಯ ನೀರು ಸರಬರಾಜನ್ನು ಸ್ಥಗಿತಗೊಂಡಿದ್ದು. ಜನರಿಗೆ ನೀರಿನ ಅಹಾಕಾರ ತಲೆದೂರಿದರು ನಗರಸಭಾ ಅಧಿಕಾರಿ ಗಳು ಮಾತ್ರ ಗಾಡ ನಿದ್ರೆಗೆ ಜಾರಿದ್ದಾರೆ ಎಂದು ಆರೋಪಿಸಿದರು.೩೧ ವಾರ್ಡ್‌ಗಳಿಗೆ (೧ಲಕ್ಷ ಜನಸಂಖ್ಯೆ) ಕೇವಲ ಮೂರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ ಹೇಗೆ? ಕೆಟ್ಟು ನಿಂತಿರುವ ಕೊಳವೆ ಬಾವಿಗಳನ್ನು ದುರಸ್ಥಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರು ಅಧಿಕಾರಿಗಳು ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಸಂಗಮೇಶ್ವರ ಎಂಟರ್ ಪ್ರೈಸಸ್‌ನವರು ಕೊಳವೆಬಾವಿಗಳು ಹಾಗೂ ಕಿರು ನೀರು ಯೋಜನೆ ಘಟಕಗಳನ್ನು ನಿರ್ವಹಣೆ ಮತ್ತು ದುರಸ್ಥಿ ಮಾಡಲು ವಾರ್ಷಿಕ ಗುತ್ತಿಗೆ ಪಡೆದವರು ಯಾವುದೇ ನಿರ್ವಹಣೆ ಹಾಗೂ ದುರಸ್ತಿ ಮಾಡದೆ ಬೋಗಸ್ ಬಿಲ್ ಪಡೆದಿದ್ದಾರೆ ಇದಕ್ಕೆ ನಗರಸಭೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಬಸವರಾಜ್ ಐಗೂರು ಪ್ರತಿಭಟನಾನಿರತ ಸದಸ್ಯರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ಇಲ್ಲಿನ ನೀರಿನ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು ಟ್ಯಾಂಕರ್ ಬಾಡಿಗೆ ಪಡೆಯಲು ಮಂಜೂರಾತಿಗಾಗಿ ಪತ್ರ ಬರೆಯಲಾಗಿದೆ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.ಪಟ್ಟು ಹಿಡಿದ ನಗರಸಭಾ ಸದಸ್ಯ ಜಿಲ್ಲಾಧಿಕಾರಿಗಳು ಅಥವಾ ಯೋಜನಾ ನಿರ್ದೇಶಕರ ಆದೇಶಪ್ರತಿ ಬಂದ ನಂತರವೇ ಪ್ರತಿಭಟನೆ ಕೈ ಬಿಡುವುದಾಗಿ ಆಯುಕ್ತರಿಗೆ ತಿಳಿಸಿದರು.ಪೌರಾಯುಕ್ತರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ನಗರಸಭಾ ಸದಸ್ಯರ ಪ್ರತಿಭಟನೆ ವಿಷಯ ಗಮನಕ್ಕೆ ತಂದು ಕೂಡಲೇ ಆದೇಶ ನೀಡುವಂತೆ ಮನವಿ ಮಾಡಿಕೊಂಡಾಗ ಯೋಜನಾ ನಿರ್ದೇಶಕರು ಹೆಚ್ಚುವರಿ ೫ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡುವಂತೆ ಆದೇಶ ನೀಡಿದರು.
ಯೋಜನಾ ನಿರ್ದೇಶಕರ ಆದೇಶ ಪ್ರತಿಯನ್ನು ಪ್ರತಿಭಟನಾನಿರತ ನಗರಸಭಾ ಸದಸ್ಯನಿಗೆ ನೀಡಿ ಹೋರಾಟ ಕೈಬಿಡುವಂತೆ ಮನವಿ ಮಾಡಿಕೊಂಡರು. ನಂತರ ನಗರಸಭಾ ಸದಸ್ಯ ದಾದಾ ಖಲಂದರ್ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.ಈ ವೇಳೆ ನಗರಸಭೆ ನಾಮನಿರ್ದೇಶಿತ ಸದಸ್ಯ ಇಸ್ಮಾಯಿಲ್, ಮುಖಂಡರಾದ ದಾದಾಪೀರ್ ಭಾನುವಳ್ಳಿ, ಖಾದರ್, ಮುಬಾರಕ್, ಅಬ್ಬಾಸ್, ಅಲಿ ಸೇರಿದಂತೆ ಇತರರಿದ್ದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಯುಕ್ತ ಬಸವರಾಜ್, ನಗರದಲ್ಲಿ ನೀರಿನ ಸಮಸ್ಯೆ ಎಲ್ಲಿ ತಲೆದೋರಿದೆ ಯೋ ಅಲ್ಲಿಗೆ ನಗರಸಭೆಯ ಟ್ಯಾಂಕರ್ ಮೂಲಕ ಸರಬರಾಜನ್ನು ಮಾಡಲಾಗುತ್ತಿದೆ, ೨೬೦ ಕಿರು ನೀರು ಯೋಜನೆಗಳಿಂದ ಹಾಗೂ ಹದಿನಾಲ್ಕು ಶುದ್ಧ ನೀರು ಘಟಕಗಳಿಂದ ಜನರಿಗೆ ನೀರು ಒದಗಿಸಲಾಗುತ್ತಿದೆ ಎಂದರು.