ಸಾರಾಂಶ
ಮಳೆಯ ಆರ್ಭಟಕ್ಕೆ ಗ್ರಾಮೀಣ ಪ್ರದೇಶಗಳ ರಸ್ತೆಗಳು ಕೆರೆಯಂತಾಗಿ, ರಸ್ತೆಗಳ ಮೇಲೆ ಮರ-ಗಿಡಗಳು ಉರುಳಿ ಬಿದ್ದು ಜನರು ತೀವ್ರ ತೊಂದರೆ ಎದುರಿಸುವಂತಾಯಿತು.
ಶಿರಸಿ: ತಾಲೂಕಿನಲ್ಲಿ ಮಳೆ ಆರ್ಭಟ ಗುರುವಾರ ಜೋರಾಗಿದೆ. ಎಲ್ಲಿ ನೋಡಿದರಲ್ಲಿ ಹಾನಿ, ಮನೆ ಮೇಲೆ ಮರ ಬಿದ್ದು ವಾಸ್ತವ್ಯಕ್ಕೆ ಸಮಸ್ಯೆ, ಹಳ್ಳ ಕೊಳ್ಳಗಳು ತುಂಬಿ ಹರಿದು ಆತಂಕ, ಅನಾಹುತ ಸೃಷ್ಟಿಯಾಗಿದೆ.
ಗುರುವಾರ ಬೆಳಗ್ಗೆಯಿಂದ ಆರಂಭವಾದ ಮಳೆಯಿಂದ ಸಮೃದ್ಧಿನಗರ, ದುಂಡಶಿನಗರ, ಕೋಟೆಕೆರೆ, ಅಮ್ಮ ಕಾಲನಿ, ಚಂದ್ರಾ ಕಾಲನಿ, ಪ್ರಗತಿನಗರ, ಲಯನ್ಸ್ ನಗರ, ದೇವಿಕೆರೆ ತಗ್ಗು, ಫಾರೆಸ್ಟ್ ಕಾಲನಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಚರಂಡಿಗಳಲ್ಲಿ ನೀರು ತುಂಬಿ ರಸ್ತೆಗಳ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಯಿತು. ನೀರಿನ ಜತೆ ವಿಷಪೂರಿತ ಹಾವುಗಳು ಮನೆಗೆ ನುಗ್ಗುತ್ತಿದ್ದು, ಇದರಿಂದ ನಗರ ವ್ಯಾಪ್ತಿಯ ಬೆಚ್ಚಿಬಿದ್ದರು.
ಮಳೆಯ ಆರ್ಭಟಕ್ಕೆ ಗ್ರಾಮೀಣ ಪ್ರದೇಶಗಳ ರಸ್ತೆಗಳು ಕೆರೆಯಂತಾಗಿ, ರಸ್ತೆಗಳ ಮೇಲೆ ಮರ-ಗಿಡಗಳು ಉರುಳಿ ಬಿದ್ದು ಜನರು ತೀವ್ರ ತೊಂದರೆ ಎದುರಿಸುವಂತಾಯಿತು.ಮಳೆ ಹಾನಿ: ಬೆಳಲೆ ಗ್ರಾಮದ ಗಂಗಾ ಗೋಪಾಲ ಚಲವಾದಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಅಂದಾಜು ₹೮ ಸಾವಿರ, ದೇವನಳ್ಳಿ ಗ್ರಾಮದ ಕುಳಿಗದ್ದೆಯ ವೆಂಕಟರಮಣ ನಾಗು ಗೌಡ ವಾಸ್ತವ್ಯದ ಕಚ್ಚಾ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ₹೧೦ ಸಾವಿರ, ಊರತೋಟ ಗ್ರಾಮದ ಕಿಬ್ಬಳ್ಳಿಯ ಶಾಂತಾರಾಮ ಗಣಪ ನಾಯ್ಕ ಕೊಟ್ಟಿಗೆ ಮನೆಯ ಮಣ್ಣಿನ ಗೋಡೆಯು ಕುಸಿದು ₹೮ ಸಾವಿರ ಹಾನಿಯಾಗಿದೆ.ಸೇತುವೆ ಕುಸಿತ: ಸಂಪರ್ಕ ಕಡಿತ
ಶಿರಸಿ: ತಾಲೂಕಿನ ದೇವಿಯಮನೆಯಿಂದ ಕಲ್ಲಳ್ಳಿ ಸಂಪರ್ಕಿಸುವ ರಸ್ತೆ ಮಧ್ಯದ ಸೇತುವೆ ಕುಸಿದ ಪರಿಣಾಮ ಸಂಪರ್ಕ ಕಡಿತಗೊಂಡು ಅಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ಎದುರಿಸುವಂತಾಗಿದೆ. ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆಯಿಂದ ಮಳ್ಳಳ್ಳಿ, ಎಮ್ಮೆಗುಂಡಿ, ಅಂಬಿಗೋಡು, ಕಲ್ಲಳ್ಳಿ ಸಂಪರ್ಕಿಸುವ ಸೇತುವೆ ಒಂದು ಭಾಗದ ಮಣ್ಣು ಗುರುವಾರ ಸುರಿದ ಧಾರಕಾರ ಮಳೆಯಿಂದ ಕೊಚ್ಚಿಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳ್ಳದಲ್ಲಿ ನೀರು ಭರ್ತಿಯಾಗಿ ಹರಿಯುತ್ತಿರುವುದರಿಂದ ಇನ್ನಷ್ಟು ಕುಸಿತಗೊಂಡು ಸಂಪೂರ್ಣ ಸೇತುವೆಯು ನೀರು ಪಾಲಾಗುತ್ತಿದೆ. ಈ ಭಾಗದಲ್ಲಿ ಸುಮಾರು ೪೫ಕ್ಕಿಂತ ಹೆಚ್ಚಿನ ಮನೆಗಳಿದ್ದು, ನಗರ ಸಂಪರ್ಕಕ್ಕೆ ಪ್ರಮುಖ ರಸ್ತೆಯೇ ಕಡಿತಗೊಂಡಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗದ ನಿಮಿತ್ತ ಶಿರಸಿಗೆ ಆಗಮಿಸುವರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಮನೋಜ ಭಟ್ಟ ಆಗ್ರಹಿಸಿದ್ದಾರೆ.