ಸಾರಾಂಶ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರುಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಕರ್ತವ್ಯ ಲೋಪದಿಂದಾಗಿ ತಾಲೂಕಿನ ಬಿಜಿಕೆರೆ ಗ್ರಾಮದ ವಿವಿಧ ವಾರ್ಡುಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಿದೆ. ಜನ ಜಾನುವಾರುಗಳು ಪರಿತಪಿಸುವಂತಾಗಿದೆ. ಬಹುತೇಕ ಕೂಲಿ ಕೆಲಸದಿಂದ ಜೀವನ ನಡೆಸುತ್ತಿರುವ ಜನತೆ ಇಲ್ಲಿದ್ದು, ಸಮಸ್ಯೆ ಬಿಗಡಾಯಿಸಿ ದ್ದರೂ ಪರಿಹಾರ ಮಾತ್ರ ಇಲ್ಲದಾಗಿದೆ. ಕಳೆದೊಂದು ವಾರದಿಂದ ನೀರಿನ ಭೀಕರತೆ ಸೃಷ್ಟಿ ಯಾಗಿದ್ದು ಮಹಿಳೆಯರು ಮಕ್ಕಳು, ವೃದ್ಧರು ಎನ್ನದೆ ರಾತ್ರಿ ಇಡೀ ನೀರಿಗಾಗಿ ಅಲೆದಾಡುತ್ತಿದ್ದಾರೆ. ಜನರಿಗೆ ನೀರು ಹೊಂದಿಸಿಕೊಳ್ಳುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.ನಾಲ್ಕು ವಾರ್ಡುಗಳ ಪೈಕಿ 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಏಳು ಕೊಳವೆ ಬಾವಿಗಳಿದ್ದು, ಅದರಲ್ಲಿ ಒಂದು ಕೆಟ್ಟಿದೆ. ಉಳಿದ ಆರು ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು ಪರಿಣಾಮ ಇಡೀ ಗ್ರಾಮಕ್ಕೆ ಬೇಕಾಗುವಷ್ಟು ನೀರು ಲಭ್ಯವಾಗುತ್ತಿಲ್ಲ ಎನ್ನುವುದು ನೀರಗಂಟಿಗಳ ಹೇಳಿಕೆ. ಜೊತೆಗೆ ಇರುವ ನೀರನ್ನು ಹಂಚಿಕೆ ಮಾಡುವುದರಲ್ಲಿ ಆಗುತ್ತಿರುವ ಲೋಪ ಭೀಕರತೆ ಸೃಷ್ಟಿ ಯಾಗಲು ಪ್ರಮುಖ ಕಾರಣ ಎನ್ನುವುದು ಗ್ರಾಮಸ್ಥರ ಆರೋಪ. ಗ್ರಾಮದ ಇತರೇ ವಾರ್ಡುಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಅಂಬೇಡ್ಕರ್ ನಗರದಲ್ಲಿ ತೀವ್ರ ಸಮಸ್ಯೆ ಬಾಧಿಸುತ್ತಿದೆ. ಕಳೆದೊಂದು ವಾರದಿಂದ ಹಾಹಾಕಾರ ಏರ್ಪಟ್ಟಿದ್ದರೂ ಗ್ರಾಪಂ ಅಧಿಕಾರಿ ಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸಾರ್ವಜನಿಕರು ಪಂಚಾಯಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ತಾತ್ಕಾಲಿಕ ಪರಿಹಾರವಾಗಿ ಗ್ರಾಮದಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಿದ್ದರೂ ಸಮಸ್ಯೆ ನೀಗುತ್ತಿಲ್ಲ. ಜನತೆ ತಾಮುಂದು ನಾಮುಂದು ಎಂದು ಮುಗಿ ಬೀಳುವುದು ಕಾಣಸಿಗುತ್ತಿದೆ. ನಿತ್ಯವೂ ಕುಡಿಯುವ ನೀರಿನ ಗಲಾಟೆ ನಡೆಯುತ್ತಿದ್ದು ಸಮಸ್ಯೆ ತಾರಕಕ್ಕೇರಿದೆ. ಅಧಿಕಾರಿಗಳು ಹೊಸ ಬೋರ್ ವೆಲ್ ಕೊರೆಸಲು ಮುಂದಾಗುತ್ತಿಲ್ಲ ಎನ್ನುವುದು ಜನರ ಆರೋಪ. ಶುದ್ಧ ನೀರು ಘಟಕ ಬಂದ್ ಗ್ರಾಮದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಕಾರ್ಯ ನಿರ್ವಹಿಸುತ್ತಿರುವುದು ಒಂದು ಮಾತ್ರ. ಉಳಿದ ಮೂರು ಘಟಕಗಳು ಕೆಟ್ಟು ವರ್ಷಗಳೇ ಕಳೆದಿವೆ. ದುರಸ್ತಿಗೆ ಮುಂದಾಗಬೇಕಾದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ. ನೀರಿನ ಬೀಕರತೆ ಕಂಡು ಸಾರ್ವಜನಿಕರು ಮುಂದಿನ ದಿನಗಳ ಬಗ್ಗೆ ಆತಂಕಗೊಂಡಿದ್ದಾರೆ.
ಸೂರಮ್ಮನಹಳ್ಳಿಯಲ್ಲಿ ನೀರಿಗೆ ಪರದಾಟಇದೇ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೂರಮ್ಮನಹಳ್ಳಿ ಕಳೆದ ಹದಿನೈದು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಲ್ಲಿನ ನಾಲ್ಕು ಕೊಳವೆ ಬಾವಿಗಳ ಪೈಕಿ ಎರಡರಲ್ಲಿ ನೀರು ಕಡಿಮೆಯಾಗಿದ್ದು ಉಳಿದ ಬೋರ್ ವೆಲ್ ಗಳಲ್ಲಿ ಸಿಗುವಂತಹ ನೀರಿನಿಂದ ಇಡೀ ಊರಿಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮೂರು ದಿನಗಳಿಗೊಮ್ಮೆ ನೀರು ಸಿಗುವುದು ಕಷ್ಟವಾಗಿದೆ. ಇದೇ ಗ್ರಾಮದ ಹೊಸ ಊರಿನ ನಿವಾಸಿಗಳು ನೀರು ಇಲ್ಲದೆ ಕೃಷಿ ಬೋರ್‌ವೆಲ್ ಗಳ ಕಡೆ ಮುಖ ಮಾಡುತ್ತಿದ್ದು ಅಲೆದಾಡುವಂತಾಗಿದೆ. ಬಹುತೇಕ ಕೃಷಿ ಕಾರ್ಮಿಕರೆ ವಾಸವಾಗಿರುವ ಗ್ರಾಮದಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿಗಾಗಿ ಪರದಾಡುವಂತಾಗಿದ್ದು ಕೆಲವೇ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಬಿಗುಡಾಯಿಸಲಿದೆ ಎನ್ನುವುದು ಮುಖಂಡ ನಾಗರಾಜ ಅಭಿಪ್ರಾಯವಾಗಿದೆ. ಮೊಗಲಹಳ್ಳಿಯಲ್ಲಿ ನೀರಿಗೆ ಕಿತ್ತಾಟಇದೇ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೊಗಲಹಳ್ಳಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಅಲ್ಲಿರುವ ಒಂದು ಕೊಳವೆ ಬಾವಿಯಿಂದ ಇಡೀ ಗ್ರಾಮಕ್ಕೆ ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಮೂರು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಇನ್ನು ಕೆಲ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಬಿಗುಡಾಯಿಸಲಿದೆ. ಈ ಹಿಂದೆ ಗ್ರಾಮಕ್ಕೆ ಅಂಟಿಕೊಂಡಿರುವ ದುಪ್ಪಿಕೆರೆಯಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಿಂದ ನೀರು ಪೂರೈಕೆಯಾಗುತ್ತಿತ್ತು. ಆದರೆ ಕೆರೆ ಸಮೀಪದಲ್ಲಿ ಹಾದು ಹೋಗಿರುವ ರೈಲ್ವೆ ರಸ್ತೆಗೆ ಇತ್ತೀಚೆಗೆ ಕೆಳ ಸೇತುವೆ ನಿರ್ಮಿಸುವಾಗ ಪೈಪ್ ಲೈನು ಮಾಡದ ಪರಿಣಾಮ ಪ್ರಸ್ತುತ ಹೊಸ ಪೈಪ್ ಲೈನ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೊಳವೆ ಬಾವಿಗಳು ಸ್ಥಗಿತಗೊಂಡಿರುವ ಪರಿಣಾಮ ನೀರಿನ ಸಮಸ್ಯೆ ಕಾಡುತ್ತಿದ್ದು ಇನ್ನು ಕೆಲ ದಿನಗಳಲ್ಲಿಯೇ ಇನ್ನಷ್ಟು ಉಲ್ಬಣಗೊಳ್ಳಲಿದೆ ಎನ್ನಲಾಗಿದೆ ಗ್ರಾಮಸ್ಥರು.
ಇನ್ನು, ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಟ್ಟಿಗೆ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಮಾಹಿತಿ ಪಡೆದುಕೊಂಡಿದ್ದೇನೆ. ಬರದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದರೂ ಇರುವ ಕೊಳವೆ ಬಾವಿಗಳಿಂದ ಸಿಗುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಶಾಸಕರ ಬಳಿ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸುತ್ತೇನೆ ಎಂದು ಮೊಳಕಾಲ್ಮುರು ನೀರು ಸರಬರಾಜು ಇಲಾಖೆ ಎಇಇ ಹರೀಶ್ ಹೇಳಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))