ಬೇಸಿಗೆ ಆರಂಭದಲ್ಲೇ ಕಡೂರು ಭಾಗಗಳಲ್ಲಿ ನೀರಿನ ಅಭಾವ

| Published : Apr 14 2025, 01:23 AM IST

ಸಾರಾಂಶ

ಬೇಸಿಗೆ ಆರಂಭದ ಏಪ್ರಿಲ್ ತಿಂಗಳಲ್ಲೇ ತಾಲೂಕಿನ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ.

ಸುಮಾರು 13 ಗ್ರಾಮಗಳಲ್ಲಿ ಜಲ ಸಮಸ್ಯೆ । ಬರಪೀಡಿತವಾದರೂ ವಿಶೇಷ ಅನುದಾನವಿಲ್ಲ । ಮುನ್ನೆಚ್ಚರಿಕೆಗೆ ಸೂಚನೆ

ಕಡೂರು ಕೃಷ್ಣಮೂರ್ತಿ

ಕನ್ನಡಪ್ರಭ ವಾರ್ತೆ ಕಡೂರು

ಬೇಸಿಗೆ ಆರಂಭದ ಏಪ್ರಿಲ್ ತಿಂಗಳಲ್ಲೇ ತಾಲೂಕಿನ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಕಡೂರು ತಾಲೂಕಿನ 60 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸುಮಾರು 364ಕ್ಕೂ ಹೆಚ್ಚಿನ ಗ್ರಾಮಗಳನ್ನು ಒಳಗೊಂಡ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಮಳೆಯಾಗಿ ಹಳ್ಳಿಗಾಡಿನ ಕೆರೆಕಟ್ಟೆಗಳಲ್ಲಿ ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ಇರುವ ಕಾರಣ ನೀರಿನ ತೀವ್ರತೆ ಅಷ್ಟಾಗಿ ಕಂಡಿರಲಿಲ್ಲ.

ಆದರೆ ಇದೀಗ ಬೇಸಿಗೆಯ ಆರಂಭದ ಏಪ್ರಿಲ್‌ನಲ್ಲಿ ಅನೇಕ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೊಳವೆಬಾವಿಯಲ್ಲಿ ನೀರಿನ ಸೆಲೆ ಬತ್ತಿ ಹೋಗಿ ನೀರಿನ ಅಭಾವ ಹೆಚ್ಚಾಗಿದ್ದ ಗ್ರಾಮಗಳಿಗೆ ಖಾಸಗಿಯವರ ಮತ್ತು ಪಂಚಾಯಿತಿಗಳ ಕೊಳವೆಬಾವಿಯಿಂದ, ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿತ್ತು.

ತಾಲೂಕಿನ ವಿ.ಯರದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಪಾಪುರ, ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗೇನಹಳ್ಳಿ, ಗೊಲ್ಲರಹಟ್ಟಿ. ಹುಳಿಗೆರೆಯ ದೊಡ್ಡಪ್ಪನಹಳ್ಳಿ, ಜೋಡಿ ಹೋಚೀ ಹಳ್ಳಿಯ ಬ್ಯಾಲದಾಳು ಮತ್ತು ವಡೇರಹಳ್ಳಿ, ಉಳಿಗೆರೆಯ ಮುಗಳೀಕಟ್ಟೆ, ತಿಮ್ಲಾಪುರದ ಬಿಟ್ಟೇನಹಳ್ಳಿ, ಎಸ್ ಮಾದಾಪುರ, ಕಲ್ಕೆರೆಯ ಮಂಜುನಾಥಪುರ, ಎಚ್.ತಿಮ್ಲಾಪುರ ಸೇರಿದಂತೆ ಸುಮಾರು 13 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

ಇವುಗಳಲ್ಲಿ ಎಸ್.ಮಾದಾಪುರ,ವಡೇರಹಳ್ಳಿ, ಬಿಟ್ಟೇನಹಳ್ಳಿ, ಬ್ಯಾಲದಾಳು, ಹಂಪಾಪುರ ಗ್ರಾಮಗಳಲ್ಲಿ ಅಂತರ್ಜಲ ಕಡಿಮೆಯಾಗಿದ್ದರೆ ಮತ್ತೆ ಕೆಲ ಗ್ರಾಮಗಳಲ್ಲಿ ಒಂದು ಕೊಳವೆ ಬಾವಿಯಿಂದ ಬೇರೆಡೆಗೆ ನೀರು ನೀಡುತ್ತಿರುವ ಕಾರಣ ಹಾಗು ತಾಂತ್ರಿಕ ಕಾರಣಗಳಿಂದ ನೀರು ಪೂರೈಕೆ ಮಾಡಲು ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಕಡೂರು ತಾಲೂಕು ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕಾಗಿದ್ದು, ಸುಮಾರು 25 ವರ್ಷಗಳಿಂದಲೂ ಕಡೂರು ಬರಪೀಡಿತ ತಾಲೂಕು ಎಂದು ಘೋಷಣೆ ಆಗಿದ್ದ್ರರೂ ಕೂಡ ಬರಪೀಡಿತ ತಾಲೂಕಿಗೆ ಸಿಗಬೇಕಾದ ಸವಲತ್ತುಗಳು ಸಿಕ್ಕಲಿಲ್ಲ. ಕಳೆದ ಬಾರಿಯೂ ಕಡೂರು ಬರಪೀಡಿತ ತಾಲೂಕು ಪಟ್ಟಿಯಲ್ಲಿ ಕೈಬಿಟ್ಟು ನಂತರ ಸೇರ್ಪಡೆ ಮಾಡಲಾಗಿತ್ತು. ಆದರೆ ತಾಲೂಕಿಗೆ ಯಾವುದೇ ವಿಶೇಷ ಅನುದಾನ ಬಂದಿಲ್ಲ ಎನ್ನಲಾಗಿದೆ.

ಒಟ್ಟಾರೆ ತಾಲೂಕಿನಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ ಅಭಾವ ಕಾಣಿಸಿಕೊಂಡಿದ್ದು ಸಂಬಂದಿಸಿದ ಇಲಾಖೆಗಳು ಕ್ರಮಕ್ಕೆ ಮುಂದಾಗಬೇಕಿದೆ.ಬಾಕ್ಸ್...

ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಸುವಂತಿಲ್ಲ

ಪ್ರಸ್ತುತ ರಾಜ್ಯ ಸರ್ಕಾರದ ಆದೇಶದಂತೆ ಹೊಸದಾಗಿ ಬೋರ್‌ವೆಲ್ ಕೊರೆಸುವಂತಿಲ್ಲ. ಆದರೆ ಕುಡಿವ ನೀರಿನ ತೀವ್ರತೆ ಇರುವ ಕಡೆ ಮಾತ್ರ ಡಿ.ಸಿ, ಮತ್ತು ಜಿ.ಪಂ. ಸಿ.ಇ.ಒ ರವರ ವಿಶೇಷ ಅನುಮತಿ ಪಡೆದು ಕುಡಿವ ನೀರಿಗಾಗಿ ಕೊರೆಸಬಹುದಾಗಿದೆ. ಖಾಸಗಿಯವರ ಕೊಳವೆಬಾವಿಯಿಂದ ಗ್ರಾಮ ಪಂಚಾಯಿತಿಯವರು ನೀರು ಪಡೆದು ಜನರಿಗೆ ನೀಡಬಹುದಾಗಿದೆ.

ಕೊಳವೆಬಾವಿಗೆ ಪಂಚಾಯಿತಿ ಅನುದಾನ

ಕಡೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಆಗಿಲ್ಲ. ಆದ ಕಾರಣ ಸದ್ಯಕ್ಕೆ ನೀರಿನ ಸರಬರಾಜು ಮತ್ತು ಕೊಳವೆಬಾವಿಗಳ ರಿಪೇರಿ, ರಿಫ್ರೆಶ್ ಹಾಗೂ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಮತ್ತು ಹೊಸ ಕೊಳವೆಬಾವಿಗೆ ಪಂಚಾಯಿತಿಯ 15ನೇ ಹಣಕಾಸಿನಲ್ಲಿ ಮತ್ತು ಟಾಸ್ಕ್‌ಫೋರ್ಸ್‌ ಅಡಿಯ ಅನುದಾನದಲ್ಲಿ ನಿರ್ವಹಿಸಬಹುದಾಗಿದೆ.

ನೀರಿನ ಅಭಾವ ಇರುವ ಗ್ರಾಮಗಳಲ್ಲಿ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಸದ್ಯಕ್ಕೆ ಎಲ್ಲಿಯೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಈ ಕುರಿತು ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಸಿ.ಆರ್.ಪ್ರವೀಣ್. ಕಾರ್ಯ ನಿರ್ವಹಣಾಧಿಕಾರಿ. ತಾಪಂ, ಕಡೂರು.