ಸಾರಾಂಶ
ಭದ್ರಾ ಜಲಾಶಯದಿಂದ ಮಾ. 29ರಂದು ಬಿಡುಗಡೆ ಮಾಡಿದ ನೀರು ತಾಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಶನಿವಾರ ತಲುಪಿದ್ದು, ಭಾನುವಾರದಿಂದ ಪುನಃ ನಗರದ ಜನತೆಗೆ ನಿರಂತರ ನೀರು ಪೂರೈಕೆ ಪ್ರಾರಂಭಿಸಲಾಗಿದೆ.
ರಾಣಿಬೆನ್ನೂರು: ಭದ್ರಾ ಜಲಾಶಯದಿಂದ ಮಾ. 29ರಂದು ಬಿಡುಗಡೆ ಮಾಡಿದ ನೀರು ತಾಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಶನಿವಾರ ತಲುಪಿದ್ದು, ಭಾನುವಾರದಿಂದ ಪುನಃ ನಗರದ ಜನತೆಗೆ ನಿರಂತರ ನೀರು ಪೂರೈಕೆ ಪ್ರಾರಂಭಿಸಲಾಗಿದೆ.
ನದಿಯಲ್ಲಿ ನೀರಿನ ಹರಿವು ಬಂದಾಗಿದ್ದರಿಂದ ಸುಮಾರು ಹದಿನೈದು ದಿನಗಳಿಂದ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಜನರು ಬೋರ್‌ವೆಲ್ ಮೊರೆ ಹೋಗಿದ್ದರು. ಗ್ರಾಮೀಣ ಭಾಗದಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಮಾತ್ರವಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ನದಿಗೆ ನೀರು ಹರಿಸುವಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಲ್ಲದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸಂಬಂಧಪಟ್ಟ ಅಧಿಕಾರಿಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಅಗತ್ಯ ಕ್ರಮ ಜರುಗಿಸುವಂತೆ ದೂರವಾಣಿ ಹಾಗೂ ಪತ್ರದ ಮೂಲಕ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಭದ್ರಾ ಜಲಾಶಯದಿಂದ ಮಾ. 29ರಿಂದ ಪ್ರತಿದಿನ 10 ಸಾವಿರ ಕ್ಯುಸೆಕ್‌ನಂತೆ ಏ. 6ರ ವರೆಗೆ 9 ದಿನಗಳ ಕಾಲ ಒಟ್ಟು 2 ಟಿಎಂಸಿ ನೀರು ಹರಿಬಿಡಲು ಆದೇಶ ಹೊರಡಿಸಿದ್ದರು. ಅದನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದೆ. ಹಿತಮಿತ ನೀರು ಬಳಕೆಗೆ ಮನವಿ: ಇಂದಿನಿಂದ ನಿರಂತರ ನೀರು ಪೂರೈಕೆ ಪ್ರಾರಂಭಿಸಿದ್ದರೂ ನಗರದ ಜನತೆ ನೀರನ್ನು ಹಿತಮಿತವಾಗಿ ಬಳಸಬೇಕು ಹಾಗೂ ನೀರನ್ನು ಕುದಿಯಿಸಿ ಆರಿಸಿ ಕುಡಿಯುವಂತೆ ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಮನವಿ ಮಾಡಿದ್ದಾರೆ.