ಟ್ಯಾಂಕರ್ ಮೂಲಕ ನೀರು ಸರಬರಾಜು, ಆತಂಕ ಬೇಡ: ಶಾಸಕ ಬಾದರ್ಲಿ

| Published : May 24 2024, 12:50 AM IST

ಟ್ಯಾಂಕರ್ ಮೂಲಕ ನೀರು ಸರಬರಾಜು, ಆತಂಕ ಬೇಡ: ಶಾಸಕ ಬಾದರ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು.ನೀರಿನ ಕೊರತೆ ಇರುವುದರಿಂದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ತೀರ್ಮಾನಿಸಿದಂತೆ ಹತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಇಲ್ಲಿನ ಕೆರೆಯಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಜನರು ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು. ಅವಶ್ಯಕ ಬಿದ್ದರೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಅವರು ಗುರುವಾರ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆಯನ್ನು ನೀಡಿ ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಮೊದಲು ಎಂಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರಿನ ಕೊರತೆ ಇರುವುದರಿಂದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ತೀರ್ಮಾನಿಸಿದಂತೆ ಹತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ತುರ್ವಿಹಾಳ ಕೆರೆಯಲ್ಲಿಯೂ ನೀರಿನ ಕೊರತೆ ಇದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಕೆರೆಗಳು ಹಾಗೂ ಬೋರ್ವೆಲ್ಗಳ ನೀರನ್ನು ಪೈಪ್‌ಲೈನ್‌ ಮೂಲಕ ತಂದು ಶುದ್ಧೀಕರಣ ಘಟಕಗಳಿಗೆ ಪೂರೈಸಿ ನಂತರ ಸಾರ್ವಜನಿಕರಿಗೆ ನೀರು ಬಿಡುವ ವ್ಯವಸ್ಥೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.

ನಾಗರಿಕರು ಕುಡಿಯುವ ನೀರಿನ ಕುರಿತು ಆತಂಕ ಪಡುವುದು ಬೇಡ. ಅಗತ್ಯ ಬಿದ್ದರೆ ಲಾರಿ ಹಾಗೂ ಟ್ಯಾಂಕರ್ಗಳ ಮೂಲಕ ನೀರನ್ನು ವಾರ್ಡ್ಗಳಿಗೆ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಎಚ್.ಬಾಷಾ, ಶರಣಪ್ಪ ಉದ್ಭಾಳ, ಮುಖಂಡರಾದ ಛತ್ರಪ್ಪ ಕುರುಕುಂದಿ, ಪ್ರಭುರಾಜ ಇದ್ದರು.