ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಮೌಖಿಕ ಆದೇಶದ ಮೇರೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಕಳೆದ 28 ದಿನಗಳಿಂದ ಕಾರ್ಖಾನೆಗಳಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಿದ್ದಾರೆ.
ಮುನಿರಾಬಾದ್: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಮೌಖಿಕ ಆದೇಶದ ಮೇರೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಕಳೆದ 28 ದಿನಗಳಿಂದ ಕಾರ್ಖಾನೆಗಳಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಿದ್ದಾರೆ.
ಕಾರ್ಖಾನೆಗಳಿಗೆ ಹರಿಸುತ್ತಿರುವ ನೀರನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಇಲ್ಲಿನ ಮುಖ್ಯ ಅಭಿಯಂತರದ ಕಚೇರಿಯ ಮುಂದೆ ಶನಿವಾರದಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಿದರು. ಸೋಮವಾರ ಧರಣಿಯು ಮೂರನೇ ದಿನಕ್ಕೆ ಕಾಲಿಟ್ಟಿತು.ಮೂರನೇ ದಿನವಾದ ಸೋಮವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಪ್ರತಿಭಟನೆಯಲ್ಲಿ ಕೈಜೋಡಿಸಿದರು.
ಪ್ರತಿಭಟನೆನಿರತ ರೈತರ ಮುಖಂಡ ಅಂಬರೀಶ್ ಚಾಗ್ಭಾವಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ವಿವರಿಸಿದರು ಹಾಗೂ ಅಧಿಕಾರಿಗಳು ಕಾರ್ಖಾನೆಗೆ ನೀರು ಹರಿಸುತ್ತಿರುವ ವಿಷಯದ ಬಗ್ಗೆ ಸಚಿವರ ಗಮನಕ್ಕೆ ತಂದರು. ಅಧಿಕಾರಿಗಳು ಕಾರ್ಖಾನೆಗಳಿಗೆ ನೀರು ಹರಿಸಲು ಮೇಲಧಿಕಾರಿಗಳಿಂದ ಬಂದ ಆದೇಶ ಪತ್ರ ನೀಡುತ್ತಿಲ್ಲ ಹಾಗೂ ಕಾರ್ಖಾನೆಗಳಿಗೆ ನೀರು ಹರಿಸುತ್ತಿರುವ ವಿಷಯವನ್ನು ಸೌಜನ್ಯಕ್ಕೂ ತಮ್ಮ ಗಮನಕ್ಕೂ ತಂದಿಲ್ಲ. ಜಲಾಶಯದಲ್ಲಿ ನೀರಿನ ಕೊರತೆ ಇದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು ಬೆಳೆದ ಮುಂಗಾರು ಬೆಳೆಗೆ ನೀರು ದೊರೆಯದೆ ಬೆಳೆಗಳು ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಅಂಬರೀಶ್ ಚಾಗ್ಭಾವಿ ಅವರು ಶಿವರಾಜ್ ತಂಗಡಗಿ ಅವರಿಗೆ ತಿಳಿಸಿದರು.ಆಗ ಸಚಿವ ಶಿವರಾಜ್ ತಂಗಡಗಿ, ಕಾರ್ಖಾನೆಗೆ ನೀರು ಹರಿಸಿದ ವಿಷಯ ನನಗೆ ಅಕ್ಷರಶಃ ಗೊತ್ತಿಲ್ಲ. ಈ ವಿಷಯವನ್ನು ಅಧಿಕಾರಿಗಳು ನನ್ನ ಗಮನಕ್ಕೂ ತಂದಿಲ್ಲ, ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ನೀಡಿ, ಅವರ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.
ಆನಂತರ ಸಚಿವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಕಾರ್ಖಾನೆಗಳಿಗೆ ಹರಿಸುತ್ತಿರುವ ನೀರನ್ನು ತಕ್ಷಣದಿಂದ ಸ್ಥಗಿತ ಗೊಳಿಸಬೇಕು ಎಂದು ಆದೇಶ ನೀಡಿದರು. ಅವರ ಆದೇಶದ ಅನ್ವಯ ತಕ್ಷಣದಿಂದಲೇ ಕಾರ್ಖಾನೆಗೆ ಹರಿಸತ್ತಿರುವ ನೀರನ್ನು ಸ್ಥಗಿತಗೊಳಿಸಲಾಯಿತು.ಭಾರತೀಯ ಕ್ರಾಂತಿಕಾರಿ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕನೂರ್, ಕರ್ನಾಟಕ ಅನ್ನದಾತ ರೈತ ಸಂಘದ ಸಂಸ್ಥಾಪನಾ ಅಧ್ಯಕ್ಷ ಪ್ರಕಾಶ ತಿಮ್ಮಲಾಪುರ, ಅಧ್ಯಕ್ಷ ಖಾದ್ರಿ, ರೈತ ಮುಖಂಡರಾದ ಮಾಧವ ರೆಡ್ಡಿ, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.