ಸಾರಾಂಶ
ಜು. 1ರಿಂದ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಹರಿಸಬೇಕೆಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಜು. 4ಆದರೂ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿರಲಿಲ್ಲ.
ಮುನಿರಾಬಾದ್:
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಕೇವಲ ಒಂದು ದಿನ ಮಾತ್ರ ನೀರು ಹರಿಸಿ ಮತ್ತೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಈ ಭಾಗದ ರೈತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜು. 1ರಿಂದ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಹರಿಸಬೇಕೆಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಜು. 4ಆದರೂ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಜು. 4ರ ಸಂಜೆ ನೀರು ಹರಿಸಿದ್ದರು. ಆದರೆ, ಜು. 5ರಂದು ಸಂಜೆ ಕಾಲುವೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಅಧಿಕಾರಿಗಳ ಈ ಕ್ರಮದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜು. 1ರಿಂದ ನೀರು ಹರಿಸಬೇಕೆಂದು ತೀರ್ಮಾನ ಕೈಗೊಂಡರು ಈ ವರೆಗೂ ಈ ಕಾಲುವೆಯಲ್ಲಿ ನೀರು ಹರಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ರೈತ ಮುಖಂಡ ನಾಗಪ್ಪ ಇಲಿಗೇರ ಹಾಗೂ ಖಾಜಾ ಹುಸೇನ್ ದೊಡ್ಮನಿ ಆರೋಪಿಸಿದ್ದಾರೆ. ಅಧಿಕಾರಿಗಳು ನೀರು ಹಂಚಿಕೆ ವಿಷಯದಲ್ಲಿ ರೈತರೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದಾರೆ ಎಂದು ದೂರಿದರು.ಜಲಾಶಯದಿಂದ ಕಾಲುವೆಗೆ ನೀರು ಬಿಡುವ ಸಮಯದಲ್ಲಿ ಅಧಿಕಾರಿಗಳು ಕಾಲುವೆಯಿಂದ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಬೇಸಿಗೆ ರಜೆಯಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಧರ್ಮರಾಜ್, ಕಾಲುವೆಯಿಂದ ನೀರು ಹರಿಸಿದಾಗ ಕಾಲುವೆಯಲ್ಲಿದ್ದ ಕಸದಿಂದ ನೀರು ನಿಧಾನವಾಗಿ ಹರಿಯಲು ಪ್ರಾರಂಭಿಸಿತು. ರೈತರ ಅನುಕೂಲಕ್ಕಾಗಿ ಕಾಲುವೆಯಲ್ಲಿ ಎರಡು ಜೆಸಿಬಿ ಬಳಸಿ ಕಾಲುವೆಯಲ್ಲಿ ತುಂಬಿದ ಹೂಳು ಹಾಗೂ ಕಸ ತೆಗೆಯುವ ಕಾರ್ಯ ನಡೆದಿದೆ. ಇನ್ನು ಎರಡು ದಿನ ಈ ಪ್ರಕ್ರಿಯೆ ಮುಂದುವರಿಯಲಿದ್ದು ಬಳಿಕ ಕಾಲುವೆಯಲ್ಲಿ ನೀರು ಹರಿಸಲಾಗುವುದು ಎಂದು ಹೇಳಿದ್ದಾರೆ.