- ಗಂಗೂರು ಬಳಿ ಜಾಕ್‌ವೆಲ್‌ನ ಮೋಟಾರ್‌ಗಳ ಸ್ವಿಚ್ ಆನ್ ಮಾಡಿದ ಶಾಸಕ ಶಿವಗಂಗಾ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಉಬ್ರಾಣಿ ಮತ್ತು ಅಮೃತಾಪುರ ಏತನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಸಲು ಸೋಮವಾರ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಭದ್ರಾವತಿ ತಾಲೂಕು ಗಂಗೂರು ಬಳಿಯ ಜಾಕ್‌ವೆಲ್‌ನಲ್ಲಿ ಮೋಟಾರ್‌ಗಳ ಸ್ವಿಚ್ ಆನ್ ಮಾಡುವ ಮೂಲಕ ಯೋಜನೆಯ ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಈ ಯೋಜನೆ 2004-05ರಲ್ಲಿ ಪ್ರಾರಂಭಗೊಂಡಿದೆ. ಆ ಸಂದರ್ಭದಲ್ಲಿ ನದಿಯಿಂದ ನೀರೆತ್ತಲು ಬಳಸಿದ್ದ ಮೋಟಾರು ಪಂಪ್‌ಗಳ ಬಿಡಿಭಾಗಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದಕಾರಣ ಈ ಯೋಜನೆಯ ಮೋಟಾರು ಪಂಪ್‌ಗಳು ಕೆಟ್ಟುಹೋದರೆ ರಿಪೇರಿ ಮಾಡಲು ಸಮಯ ಹಿಡಿಯುತ್ತಿದೆ ಎಂದರು.
ಈ ಯೋಜನೆಗೆ ಒಳ ಪಡುವ ಕೆರೆಗಳಿಗೆ ಜೂನ್ 1ರಿಂದ ಜನವರಿ ಅಂತ್ಯದವರೆಗೆ ನೀರನ್ನು ಹರಿಸಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮೋಟಾರು ಪಂಪ್‌ಗಳ ದುರಸ್ತಿ ಮಾಡುವ ಪದ್ಧತಿ ಇತ್ತು. ಆದರೆ, ಕಳೆದ ವರ್ಷ ಖಗ್ಗಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದ ಕಾರಣ ಈ ಭಾಗದ ಕೆರೆಗಳನ್ನು ತುಂಬಿಸಲು ಏಪ್ರಿಲ್-ಮೇ ತಿಂಗಳವರೆಗೂ ಕೆರೆಗಳಿಗೆ ನೀರು ಹರಿಸಿದ್ದರಿಂದ ಮೋಟಾರು- ಪಂಪ್‌ಗಳ ನಿರ್ವಹಣೆಯಲ್ಲಿ ವಿಳಂಬವಾಗಿದೆ. ಅವುಗಳನ್ನು ದುರಸ್ತಿಪಡಿಸಿ ಮೋಟಾರು ಚಾಲನೆ ಮಾಡಲು ವಿಳಂಬವಾಗಿದೆ ಎಂದು ಸ್ವಷ್ಟಪಡಿಸಿದರು.
ಈ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‌ಗಳು ಅರಣ್ಯ ಪ್ರದೇಶದಲ್ಲಿ ಹಾದುಹೋಗಿದ್ದು, ಈ ಲೈನ್‌ನ ಅಕ್ಕಪಕ್ಕದಲ್ಲಿ ಮರ-ಗಿಡಗಳು ಬೆಳೆದಿವೆ. ಇದರಿಂದ ಸಣ್ಣ ಗಾಳಿ, ಮಳೆ ಬಂದರೂ ವಿದ್ಯುತ್ ಕಂಬಗಳಲ್ಲಿ ಲೈನ್ ಟ್ರಿಪ್ ಆಗಿ ಮೋಟಾರ್‌ಗಳು ಕೆಟ್ಟು ಹೋಗುತ್ತಿವೆ. ವಿದ್ಯುತ್ ಲೈನ್ ಹಾದುಹೋಗಿರುವ ಅರಣ್ಯದಲ್ಲಿ ಬೆಳೆದಿರುವ ಮರ- ಗಿಡಗಳನ್ನು ತಕ್ಷಣವೇ ತೆರವು ಗೊಳಿಸಬೇಕು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮೆಸ್ಕಾಂಗೆ ಸಹಕಾರ ನೀಡಬೇಕು ಎಂದರು.
ಉಬ್ರಾಣಿ ಏತ ನೀರಾವರಿ ಕೆರೆಗಳಿಗೆ ನೀರು ತುಂಬಿಸಲು ತಡವಾಗಿ ನೀರು ಹರಿಸಲು ಪ್ರಾರಂಭಿಸಿದ್ದು ಮತ್ತು ಮಳೆ ಕೊರತೆಯಿಂದ ಹೊಳೆಯಲ್ಲಿ ನೀರಿನ ಕೊರತೆ ಇತ್ತು. ಪ್ರಸ್ತುತ ಮಳೆಬಂದ ಕಾರಣ ಭದ್ರಾನದಿಯಲ್ಲಿ ನೀರು ಬರುತ್ತಿದ್ದು, ನದಿಯಲ್ಲಿ ನೀರು ಸಿಗುವವರೆಗೂ ಮೋಟಾರ್‌ಗಳನ್ನು ಆನ್ ಮಾಡಿ ಯೋಜನೆಯ ಎಲ್ಲ ಕೆರೆಗಳಿಗೆ ನೀರನ್ನು ಹರಿಸಲಾಗುವುದು ಎಂದರು.ಈ ಸಂದರ್ಭ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್, ನೀರಾವರಿ ನಿಗಮದ ಅಭಿಯಂತರ ಲಿಂಗರಾಜ್, ಮೆಸ್ಕಾಂ ಇಲಾಖೆ ಅಭಿಯಂತರರಾದ ಜಯದೇವಪ್ಪ, ವಿರೇಂದ್ರ, ಮುನಾಫ್, ಲಕ್ಷ್ಮಣ ನಾಯ್ಕ್, ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ, ಅಮೃತ, ನೀರಾವರಿ ಯೋಜನೆ ಅಧ್ಯಕ್ಷ ಬಸವಂತಪ್ಪ, ದಿನೇಶ್, ಕರ್ನಾಟಕ ನೀರಾವರಿ ನಿಗಮದ ಅಭಿಯಂತರ ಕೃಷ್ಣ ಪ್ರಸಾದ್, ರೈತರು ಹಾಜರಿದ್ದರು.
- - -(ಕೋಟ್) ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಉಬ್ರಾಣಿ ಮತ್ತು ಸಾಸಿವೆಹಳ್ಳಿ ಏತನೀರಾವರಿ ಈ ಎರಡು ಯೋಜನೆಗಳು ಕಾಂಗ್ರೆಸ್ ಪಕ್ಷದ ಯೋಜನೆಗಳಾಗಿವೆ. ನಾನು ಮೊದಲ ಬಾರಿಗೆ ಶಾಸಕ ಆಗಿದ್ದರೂ ಈ ಎರಡು ಯೋಜನೆಗಳಲ್ಲಿ ಬಿಟ್ಟುಹೋಗಿದ್ದ 66 ಕೆರೆಗಳನ್ನು ತುಂಬಿಸುವ ಹೊಸ ಏತನೀರಾವರಿ ಯೋಜನೆಗೆ ನಮ್ಮ ಕಾಂಗ್ರೆಸ್ ಸರ್ಕಾರ ₹360 ಕೋಟಿ ಮಂಜೂರು ಮಾಡಿದೆ. ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ.
- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.- - -
-10ಕೆಸಿಎನ್ಜಿ1: ಉಬ್ರಾಣಿ-ಅಮೃತಾಪುರ ಏತನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಸಲು ಮೋಟಾರ್‌ಗಳಿಗೆ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಚಾಲನೆ ನೀಡಿದರು.-10ಕೆಸಿಎನ್‌ಜಿ2: ಶಾಸಕ ಬಸವರಾಜು ವಿ. ಶಿವಗಂಗಾ ರೈತರನ್ನು ಉದ್ದೇಶಿಸಿ ಮಾತನಾಡಿದರು. ತರಿಕೇರೆ ಕ್ಷೇತ್ರದ ಶಾಸಕ ಶ್ರೀನಿವಾಸ್ ಇದ್ದಾರೆ.