ವನ್ಯಜೀವಿಗಳ ನೀರಿನ ದಾಹ ತಣಿಸುವ ನೀರಿನ ತೊಟ್ಟಿಗಳು

| Published : Mar 27 2025, 01:02 AM IST

ಸಾರಾಂಶ

ನೆತ್ತಿಯ ಮೇಲೆ ಸುಡು ಬಿಸಿಲಿನ ತಾಪಕ್ಕೆ ಕುಡಿಯುವ ನೀರು ಅರಸಿ, ನಾಡಿನ ಕಡೆಗೆ ಬರುವ ವನ್ಯ ಜೀವಿಗಳ ನೀರಿನ ದಾಹ ಇಂಗಿಸಲು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯು ನೀರಿನ ತೊಟ್ಟಿ ನಿರ್ಮಿಸಿ ಕುಡಿವ ನೀರಿನ ವ್ಯವಸ್ಥೆ ಮಾಡಿದೆ.

ಅರಣ್ಯ ಇಲಾಖೆಯ ಪ್ರಾದೇಶಿಕ ವಲಯದಿಂದ ನೀರಿನ ವ್ಯವಸ್ಥೆಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ನೆತ್ತಿಯ ಮೇಲೆ ಸುಡು ಬಿಸಿಲಿನ ತಾಪಕ್ಕೆ ಕುಡಿಯುವ ನೀರು ಅರಸಿ, ನಾಡಿನ ಕಡೆಗೆ ಬರುವ ವನ್ಯ ಜೀವಿಗಳ ನೀರಿನ ದಾಹ ಇಂಗಿಸಲು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯು ನೀರಿನ ತೊಟ್ಟಿ ನಿರ್ಮಿಸಿ ಕುಡಿವ ನೀರಿನ ವ್ಯವಸ್ಥೆ ಮಾಡಿದೆ.

ತಾಲೂಕಿನ ತುಂಬಿನಕೆರೆ, ಹ್ಯಾರಡ, ಬೆಣಕಲ್ಲು ಮತ್ತು ಸೋಗಿ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ, ನರಿ, ಕಾಡು ಹಂದಿ, ಮುಳ್ಳು ಹಂದಿ, ಕೊಂಡಕುರಿ, ಮಂಗಗಳು, ತೊಳ, ಮೊಲ, ನವಿಲು ಸೇರಿದಂತೆ ಹತ್ತಾರು ಜಾತಿಯ ವನ್ಯಜೀವಿಗಳಿವೆ. ಅರಣ್ಯ ಪ್ರದೇಶದಲ್ಲಿನ ನೀರಿನ ಚೆಕ್‌ ಡ್ಯಾಂಗಳಲ್ಲಿ ಈ ಹಿಂದೆ ಇದ್ದ ಮಳೆ ನೀರು ಬೇಸಿಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಕುಡಿವ ನೀರಿಗಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಮತ್ತು, ಕಾಡಂಚಿನ ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳ ನೀರನ್ನು ಅರಸಿ ಬರುತ್ತಿವೆ.

ಕಾಡಿನ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಹತ್ತಾರು ಕಡೆಗಳಲ್ಲಿ ಸಿಮೆಂಟ್‌ನ ತೊಟ್ಟಿಗಳನ್ನು ಇಟ್ಟು ನೀರಿನ ದಾಹ ಇಂಗಿಸುತ್ತಿವೆ.

ತುಂಬಿನಕೆರೆ ಕಾಯ್ದಿಟ್ಟ ಅರಣ್ಯ ಪ್ರದೇಶ, ಕೋಮಾರನಹಳ್ಳಿ ತಾಂಡ, ತುಂಬಿನಕೆರೆ ತಾಂಡ, ಹ್ಯಾರಡ ಗ್ರಾಮದ ಹೊಸ ಮಲಿಯಮ್ಮ, ಹಳೆ ಮಲಿಯಮ್ಮ ಕೆರೆ, ಹಿರೇಹಡಗಲಿ ಕೆರೆ ಸೇರಿದಂತೆ ಇನ್ನು ಕೆಲವಡೆಗಳಲ್ಲಿನ ಕೆರೆಗಳಿಗೆ, ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ನೀರು ಹರಿಸಲಾಗುತ್ತಿದೆ. ಆ ಕೆರೆಯಲ್ಲಿನ ನೀರು ಕುಡಿಯಲು ರಾತ್ರಿ ವೇಳೆಯಲ್ಲಿ ಕಾಡಿನ ವನ್ಯ ಜೀವಿಗಳು ಬರುತ್ತಿವೆ. ಹಗಲು ಹೊತ್ತಿನಲ್ಲಿ ಕಾಡಿನ ಒಳಗೆ ಇಡಲಾಗಿರುವ ಅರಣ್ಯ ಇಲಾಖೆಯ ಸಿಮೆಂಟ್‌ ತೊಟ್ಟಿನ ನೀರು ಕುಡಿಯುತ್ತಿವೆ.

ತಾಲೂಕಿನ ತುಂಬಿನಕೆರೆ, ಸೋಗಿ, ಬೆಣಕಲ್ಲು ಮತ್ತು ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಮ್ಮ ಸಿಬ್ಬಂದಿ ಸಹಕಾರದೊಂದಿಗೆ ಹತ್ತಾರು ನೀರಿನ ತೊಟ್ಟಿಗಳಲ್ಲಿ, ವನ್ಯ ಜೀವಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದೇವೆ.

ರೇಣುಕಾ, ಅರಣ್ಯಾಧಿಕಾರಿ, ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಹೂವಿನಹಡಗಲಿ