ಸದಸ್ಯರ ಒಪ್ಪಿಗೆಯಂತೆ ನೀರಿನ ಕರ ದರ ನಿಗದಿ

| Published : Feb 01 2025, 12:01 AM IST

ಸಾರಾಂಶ

Water tax rates are set as per the consent of the members.

-ಮಾಜಿ ಸಚಿವ ರಾಜೂಗೌಡರಿಗೆ ಶಾಸಕ ರಾಜಾ ವೇಣುಗೋಪಾಲ ತಿರುಗೇಟು

----

ಕನ್ನಡಪ್ರಭ ವಾರ್ತೆ ಸುರಪುರ

ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲೇ ಅವರ ಒಪ್ಪಿಗೆಯಂತೆ ದಾಖಲಾತಿ ಪ್ರಕಾರ ನೀರಿನ ಕರದ ದರ ನಿಗದಿಪಡಿಸಲಾಗಿದೆ. ನಾನೊಬ್ಬನೇ ದರ ನಿಗದಿ ಮಾಡಿಲ್ಲ ಎಂದು ಮಾಜಿ ಸಚಿವ ರಾಜೂಗೌಡ ಅವರಿಗೆ ಹಾಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿರುಗೇಟು ನೀಡಿದರು.

ನಗರದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೊಬ್ಬನೇ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಶಾಸಕನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೀರಿನ ದರ ಅವೈಜ್ಞಾನಿಕ ಎಂಬುದಾಗಿ ಮಾಜಿ ಸಚಿವರ ಹೇಳಿಕೆ ಸಲ್ಲದು ಎಂದು ತಿವಿದರು.

ಕೆಲವು ಮನೆಗಳನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಿದ್ದು, 14 ಸಾವಿರದ ವರೆಗೆ ಬಿಲ್ ಬಂದಿದೆ. ಆದ್ದರಿಂದ ಅತೀ ಕಡಿಮೆ 120 ರು.ಗಳು ತಿಳಿಸಿದ್ದರು. ಇದಕ್ಕೆ ಎಲ್ಲ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಸಾಕ್ಷಿಯಾಗಿದ್ದಾರೆ. ಅದರಂತೆ 20 ತಿಂಗಳಲ್ಲಿ 15 ತಿಂಗಳು ಕರ ಪಾವತಿಸುವಂತೆ ನಿರ್ಣಯಿಸಲಾಯಿತು. ಅಲ್ಲದೇ ಒಮ್ಮೆಲೇ ಕೊಡುವಂತೆ ಎಲ್ಲಿಯೂ ಹೇಳಿಲ್ಲ ಎಂದರು.

ನೀರಿನ ಕರ ಯಾರ ಖಾತೆಗೂ ಜಮೆಯಾಗುವುದಿಲ್ಲ, ಅದು ನೇರವಾಗಿ ನಗರಸಭೆಯ ಖಾತೆಗೆ ಜಮೆಯಾಗುತ್ತದೆ. ಈ ಹಣದಿಂದ ನಗರದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಮಾಜಿ ಸಚಿವರು ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾದವರು ಕ್ಷುಲ್ಲಕವಾಗಿ ಹೇಳಿಕೆ ನೀಡಬಾರದು ಎಂದರು.

------

....ಕೋಟ್.......

ದರ ನಿಗದಿಪಡಿಸುವ ಮುನ್ನ ಕೆಲವು ಮನೆಗಳನ್ನು ಆಯ್ಕೆ ಮಾಡಿಕೊಂಡು ಮೀಟರ್‌ಗಳ ರೀಡಿಂಗ್ ಪಡೆದು ನೋಡಿದಾಗ ಸರಾಸರಿ ಎಲ್ಲ ಮನೆಗಳಲ್ಲಿ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚು ನೀರು ಬಳಕೆಯಾಗಿದೆ. ಹೀಗಾಗಿ ನೀರಿನ ಕರ ಭರಿಸಲು ಜನರಿಗೆ ಹೊರೆಯಾಗುತ್ತದೆ ಎಂಬುದನ್ನು ತಿಳಿದು ಕನಿಷ್ಠ ದರ ನಿಗದಿ ಪಡಿಸಲಾಗಿದೆ.

- ರಾಜಾ ವೇಣುಗೋಪಾಲ ನಾಯಕ, ಶಾಸಕರು, ಸುರಪುರ.

------

31ವೈಡಿಆರ್12: ಸುರಪುರ ನಗರದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.