ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೊನೆಯ ಭಾಗಕ್ಕೆ ನೀರು ತಲುಪಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನೀರು ತಲುಪದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಟೀಕಿಸಿದರು.ತಾಲೂಕಿನ ದೋರನಹಳ್ಳಿ, ಹೂವಿನಕೊಪ್ಪಲು, ಸುಜ್ಜಲೂರು, ರಾಗಿಬೊಮ್ಮನಹಳ್ಳಿ, ಮಾರೇಹಳ್ಳಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಆರ್‌ಎಸ್ ಅಣೆಕಟ್ಟು ಭರ್ತಿಯಾದ ದಿನದಿಂದ ನಿರಂತರವಾಗಿ ನಾಲೆಯಲ್ಲಿ ನೀರು ಹರಿಯುತ್ತಿದೆ. ಆ ನೀರೆಲ್ಲವೂ ಎಲ್ಲಿಗೆ ಹೋಗುತ್ತಿದೆ. ಕೊನೆಯ ಭಾಗಕ್ಕೆ ನೀರು ತಲುಪಿಸುವುದನ್ನು ಗುರಿಯಾಗಿಸಿಕೊಂಡು ನೀರು ತಲುಪುವುದಕ್ಕೆ ಅಡ್ಡಿಯಾಗಿರುವ ತೊಂದರೆ ನಿವಾರಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪವೆಸಗುತ್ತಿದ್ದಾರೆ ಎಂದು ದೂರಿದರು.ಕಡೇ ಭಾಗಕ್ಕೆ ನೀರು ತಲುಪದೆ ನಾಟಿ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಭತ್ತ ನಾಟಿಯಾಗಬೇಕಿದ್ದ ಗದ್ದೆಗಳು ತೆಕ್ಕಲು ಬಿದ್ದಿವೆ. ಕೆರೆಗಳಿಗೆ ಕಾಲುವೆ ಸಂಪರ್ಕಗಳಿದ್ದರೂ ಕೆರೆಗಳನ್ನೂ ತುಂಬಿಸಿಲ್ಲ. ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ಇದೆ. ಕೆರೆಗಳೆಲ್ಲವೂ ಖಾಲಿಯಾಗಿದ್ದು ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು ನೀರಿಲ್ಲದೆ ಕೃಷಿಯನ್ನೇ ಕೈಬಿಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಭತ್ತ ನಾಟಿಯಾಗಿ ಒಂದು ತಿಂಗಳಾಗಬೇಕಿತ್ತು. ಇದುವರೆಗೂ ನಾಟಿ ಕಾರ್ಯ ನಡೆದಿಲ್ಲ. ಕಳೆದ ವರ್ಷ ಬರಗಾಲದಿದಾಗಿ ಬೆಳೆಯನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಕೆಆರ್‌ಎಸ್ ಅಣೆಕಟ್ಟು ತುಂಬಿದ್ದರೂ ಬೆಳೆ ಬೆಳೆಯುವುದಕ್ಕೆ ನೀರು ಸಿಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಪ್ರದೇಶಗಳಿಗೆ ಯಾವಾಗ ನೀರು ಹರಿಸುತ್ತಾರೆ, ಯಾವಾಗ ನಿಲ್ಲಿಸುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಆ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನೂ ನೀಡುವುದಿಲ್ಲ. ಹೀಗಾಗಿ ಅತಂತ್ರ ಸ್ಥಿತಿಯಲ್ಲಿ ಕೃಷಿ ಚಟುವಟಿಕೆ ನಡೆಸುವಂತಾಗಿದೆ ಎಂದು ಟೀಕಿಸಿದರು.ಮಳವಳ್ಳಿ ಕ್ಷೇತ್ರದ ಶಾಸಕರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ನಾಲೆಯ ಮೇಲೆ ಓಡಾಡಿ ಕೊನೆಯ ಭಾಗಕ್ಕೆ ನೀರು ತಲುಪದಿರುವುದಕ್ಕೆ ಎಲ್ಲಿ ತೊಂದರೆ, ಸಮಸ್ಯೆಗಳಾಗಿವೆ ಎನ್ನುವುದನ್ನು ಗುರುತಿಸಿ ಪರಿಹಾರ ಸೂಚಿಸುವುದನ್ನು ಬಿಟ್ಟು ಮೈಷುಗರ್ ಅಧ್ಯಕ್ಷರಿಂದ ಜಲಪಾತೋತ್ಸವ ಕುರಿತು ಹೇಳಿಕೆ ಕೊಡಿಸುತ್ತಾರೆ. ಮೈಷುಗರ್ ಅಧ್ಯಕ್ಷರಿಗೆ ಮಳವಳ್ಳಿ ತಾಲೂಕಿನ ಬಗ್ಗೆ ಏನು ಗೊತ್ತಿದೆ. ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಕೆರೆಗಳು ತುಂಬಿವೆ, ಇನ್ನೆಷ್ಟು ಖಾಲಿ ಇವೆ ಎನ್ನುವುದೂ ಸೇರಿದಂತೆ ಕೃಷಿ ಚಟುವಟಿಕೆ ಬಗ್ಗೆ ಅವರಿಗೆ ಯಾವುದೇ ಮಾಹಿತಿಯೂ ಇಲ್ಲ. ಅಂತಹವರಿಂದ ಮಾಹಿತಿ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಗಗನಚುಕ್ಕಿ ಜಲಪಾತೋತ್ಸವ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಜಲಪಾತೋತ್ಸವ ನಡೆಸುವುದಕ್ಕೆ ತೋರಿಸುತ್ತಿರುವ ಆಸಕ್ತಿ, ಉತ್ಸಾಹವನ್ನು ಕೆರೆಗಳನ್ನು ತುಂಬಿಸುವ, ಕೊನೆಯ ಭಾಗಕ್ಕೆ ನೀರು ತಲುಪಿಸುವ ವಿಚಾರದಲ್ಲಿ ತೋರಿಸದಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು.ಸಂಸದ ಮತ್ತು ಕೇಂದ್ರ ಸಚಿವರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮಳವಳ್ಳಿ ತಾಲೂಕಿನ ಯಾವ ಭಾಗಕ್ಕೆ ನೀರು ತಲುಪಿಲ್ಲ, ಎಷ್ಟು ಕೆರೆಗಳು ಭರ್ತಿಯಾಗಿಲ್ಲವೆಂಬ ಮಾಹಿತಿ ನೀಡುವಂತೆ ಕೋರಿದ್ದಾರೆ. ಅದರಂತೆ ತಾಲೂಕಿನ ಕೊನೆಯ ಭಾಗದಲ್ಲಿ ಓಡಾಡಿ ಅವರಿಗೆ ಸಮಗ್ರ ವರದಿ ನೀಡುವುದಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಹನುಮಂತು ಇತರರಿದ್ದರು.