ಸಾರಾಂಶ
ಕನಕಪುರ: ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡು ತಿಂಗಳುಗಳು ಉರುಳುತ್ತಿದ್ದರೂ, ತಾಲೂಕಿನಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡು ತಿಂಗಳುಗಳು ಉರುಳುತ್ತಿದ್ದರೂ, ತಾಲೂಕಿನಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ತಿಳಿಸಿದರು. ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತರೆಡೆ ಉತ್ತಮ ಮಳೆಯಾಗಿ ತಾಲೂಕಿನಲ್ಲಿ ಹರಿದು ಹೋಗುವ ಕಾವೇರಿ ನದಿಯು ಉಕ್ಕಿ ಹರಿಯುತ್ತಿದೆ. ಈ ಕ್ಷೇತ್ರದ ಶಾಸಕರೇ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದು, ಜಿಲ್ಲೆಯ ಹಾಗೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದಲ್ಲಿ ರೈತರು ಮುಂಗಾರು ಬೆಳೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಳೆದ ಸಾಲಿನಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸದಿರುವುದರಿಂದ ರೈತ ಮಳೆಯನ್ನೇ ನಂಬಿಕೂಡುವಂತಾಗಿದೆ. ಜುಲೈ ತಿಂಗಳು ಕಳೆಯುತ್ತಿದ್ದರೂ, ಬೇಸಾಯಕ್ಕೆ ಬೇಕಾಗುವಷ್ಟು ಮಳೆಯಾಗಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಜಿಲ್ಲೆ ಹಾಗೂ ರೈತರ ಸಂಕಷ್ಟ ಅರಿತು ಅತಿ ಶೀಘ್ರದಲ್ಲಿ ಕೆರೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇಲ್ಲದಿದ್ದಲ್ಲಿ ತಾಲ್ಲೂಕಿನ ರೈತರು ಈ ವರ್ಷ ಭೀಕರ ಬರ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಶಾಶ್ವತ ನೀರಾವರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಮಳೆಯನ್ನೇ ನಂಬಿ ರೈತರು ಬದುಕು ಸಾಗಿಸಲು ಆಗದು. ಸಚಿವ ಶಿವಕುಮಾರ್ ಅವರು ಜಿಲ್ಲೆಯ ಮಳೆಯ ಸಮಗ್ರ ವರದಿಯನ್ನು ತರಿಸಿಕೊಂಡು ಅತಿ ಶೀಘ್ರ ಕೆರೆಗಳಿಗೆ ನೀರು ತುಂಬಿಸುವ ಕಡೆಗೆ ಗಮನ ಹರಿಸಿದರೆ ರೈತರು ಮುಂಗಾರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೇಷ್ಮೆ ಉತ್ಪಾದಕರ ಕಂಪನಿಯ ಅಧ್ಯಕ್ಷ ರಾಮಕೃಷ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಕುಮಾರ್, ಹಾರೋಹಳ್ಳಿ ರೈತ ಸಂಘದ ಅಧ್ಯಕ್ಷ ಬಸವರಾಜು ರೈತ ಮುಖಂಡರಾದ ನಂಜರಾಜ ಅರಸು, ಪುನೀತ್, ಶಿವನೇಗೌಡ, ರಂಗಪ್ಪ ಮತ್ತಿತರರಿದ್ದರು.