ಸತ್ತೇಗಾಲದಿಂದ ಮಾಗಡಿಯ 44 ಕೆರೆಗಳಿಗೆ ನೀರು

| Published : Aug 30 2025, 01:00 AM IST

ಸತ್ತೇಗಾಲದಿಂದ ಮಾಗಡಿಯ 44 ಕೆರೆಗಳಿಗೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಮಾಗಡಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು, ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ಧಿಗೆ 13 ಕೋಟಿ, ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮಾಗಡಿ: ಮಾಗಡಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು, ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ಧಿಗೆ 13 ಕೋಟಿ, ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದ ಕೋಟೆ ಮೈದಾನದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಗಡಿ ಯೋಜನಾ ಪ್ರಾಧಿಕಾರದಿಂದ ಗೌರಮ್ಮ ಕೆರೆ ಅಭಿವೃದ್ಧಿಗೆ 20 ಕೋಟಿ ನೀಡಲಾಗಿದೆ. ಇ-ಸ್ವತ್ತನ್ನು 1200 ಜನರಿಗೆ ವಿತರಿಸಿದ್ದು ಮಿಕ್ಕವರಿಗೂ ಶೀಘ್ರದಲ್ಲೇ ವಿತರಿಸಲಾಗುವುದು. ಸುಮ್ಮನಹಳ್ಳಿಯಿಂದ ತಾವರೆಕೆರೆವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಿಂದ 40 ಕೋಟಿ ವೆಚ್ಚದ ಕಾಮಗಾರಿಗೆ ಆರೋಗ್ಯ ಸಚಿವರು ಮತ್ತು ನೂತನ ಬಸ್ ನಿಲ್ದಾಣ ಹಾಗೂ ಡಿಪೋ ಬಗ್ಗೆ ಸಾರಿಗೆ ಸಚಿವರು ವಾಗ್ದಾನ ನೀಡಿದ್ದಾರೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕೆಲಸಗಳೇ ಸಾಕ್ಷಿ ಎಂದರು.

ನಿಜವಾದ ಬಂಡೆ ಬಾಲಕೃಷ್ಣ:

ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ ಕೆಂಪು ಬಂಡೆ ನಿಮ್ಮ ಬಾಲಕೃಷ್ಣ. ಇವರು ಗಟ್ಟಿಯಾಗಿ ಬಂಡೆಯಂತೆ ಕುಳಿತುಕೊಂಡು ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಎಲ್ಲೇ ಹೋದರು ಕ್ಷೇತ್ರದ ಬಗ್ಗೆ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಕ್ಷೇತ್ರದ ಜನರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮಾಗಡಿ ಕ್ಷೇತ್ರ ಬಾಲಕೃಷ್ಣ ಅವರದ್ದಲ್ಲ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರ ಸ್ವಂತ ಕ್ಷೇತ್ರವಿದ್ದಂತೆ. ಕನಕಪುರದಲ್ಲಿ ಯಾವ ರೀತಿ ಕೆಲಸ ಮಾಡುತ್ತಾ ಇದ್ದೇವೋ ಅದೇ ರೀತಿ ಇಲ್ಲಿಯೂ ಕೆಲಸ ಮಾಡುತ್ತೇವೆ ಎಂದರು.

ಜನರ ಏಳಿಗೆಗೆ ಜಿಲ್ಲೆಯ ಹೆಸರು ಬದಲಾವಣೆ:

ಜನ ಸಾಮಾನ್ಯರ ಬದುಕು ಏಳಿಗೆಯಾಗಬೇಕು, ಎಲ್ಲರ ಬದುಕಿನಲ್ಲಿ ಹೊಸ ರೂಪ ಕಾಣಬೇಕು, ಎಲ್ಲರ ಆಸ್ತಿ ಮೌಲ್ಯ ಹೆಚ್ಚಳವಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದೇವೆ. ಜನತಾದಳದ ನಾಯಕರು ದೆಹಲಿಗೆ ಹೋಗಿ ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ಬರೆಸಿದ್ದರು. ಕುಮಾರಣ್ಣ ಇದರ ವಿರುದ್ಧ ಬಂದ್ ಮಾಡಿಸಿದರು. ಆದರೂ ಸಹ ಹೆಸರು ಬದಲಾವಣೆಗಾಗಿ ನಾನು ದೊಡ್ಡ ಹೋರಾಟ ಮಾಡಿದೆ ಎಂದು ಹೇಳಿದರು.

ಅವರ ಬದುಕನ್ನು ಏಳಿಗೆ ಮಾಡಿಕೊಳ್ಳಬೇಕು ಎಂದು ಇದೇ ಕುಮಾರಣ್ಣ ಹಾಸನದಿಂದ ಬೆಂಗಳೂರಿಗೆ ಬಂದು ಆಸ್ತಿ ತೆಗೆದುಕೊಂಡಿಲ್ಲವೇ? ರಾಮನಗರದಲ್ಲಿ ನೀವು, ನಿಮ್ಮ ತಂದೆಯವರು ರಾಜಕಾರಣ ಮಾಡಿದರೂ ನಾವು ಬೇಸರಿಸಿಕೊಳ್ಳಲಿಲ್ಲ. ನೀವು ನಿಮ್ಮ ಊರಿನಲ್ಲಿ ಆಸ್ತಿ ತೆಗೆದುಕೊಳ್ಳದೇ ಇಲ್ಲೇಕೆ ಆಸ್ತಿ ತೆಗೆದುಕೊಂಡಿರಿ ಎಂದು ಪ್ರಶ್ನಿಸಿದರು.

ಕೆಲವರು ರಾಮನಗರ ಜಿಲ್ಲೆ ಎಂದು ಹೇಳುತ್ತಿದ್ದರು. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಶಾಸಕರಾದ ಹುಲಿಕಟ್ಟೆ ಬಾಲಕೃಷ್ಣ, ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಎಚ್.ಡಿ ಕುಮಾರಸ್ವಾಮಿ ಹೀಗೆ ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಬೆಂಗಳೂರು ಜಿಲ್ಲೆಯವರಾದ ನಮ್ಮ ಅಸ್ಮಿತೆಯನ್ನು ಬಿಟ್ಟು ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಸರ್ವರಿಗೂ ಸಮಬಾಳು, ಸಮಪಾಲು:

ರೈತರಿಗೆ ಅನುಕೂಲ ಮಾಡಿಕೊಟ್ಟೆವು:

ಹೈ ವೋಲ್ಟೇಜ್ ಡಿಸ್ಟ್ರಿಬ್ಯೂಷನ್ ಸಿಸ್ಟಂ ಯೋಜನೆಯ ಅಡಿ ಒಬ್ಬ ಅಥವಾ ಇಬ್ಬರು ರೈತರಿಗೆ ಟ್ರಾನ್ಸ್ ಫಾರ್ಮರ್ಸ್ ಗಳನ್ನು ಹಂಚಿದ ಇತಿಹಾಸ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಇಡೀ ದೇಶದಲ್ಲಿಯೇ ಈ ಯೋಜನೆ ಗಮನ ಸೆಳೆದಿತ್ತು. ಯಾವ ಕ್ಷೇತ್ರದಲ್ಲಿಯೂ ಆಗದ ಕೆಲಸ ಇಲ್ಲಿ ಆಗಿದೆ. ಟ್ರಾನ್ಸ್ ಫಾರ್ಮರ್ ಗಳನ್ನು ದುರಸ್ತಿಗೊಳಿಸಲು ಈ ಹಿಂದೆ 30-40 ಸಾವಿರ ಲಂಚ ಕೇಳುತ್ತಿದ್ದರು. ಆದರೆ ಈಗ ರೈತರೇ ಇದನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ನಾವು ಪರಿಚಯಿಸಿದೆವು ಎಂದರು.

ಕೆಂಪೇಗೌಡರು ಕಟ್ಟಿದ ಕೋಟೆ ಹಾಗೂ ಕೆಂಪಾಪುರದಲ್ಲಿನ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ನಮ್ಮ ಸರ್ಕಾರ 100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಸುಮ್ಮನಹಳ್ಳಿಯಲ್ಲಿ 100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಭವನ ನಿರ್ಮಾಣ ಮಾಡಲಾಗುತ್ತಿದೆ. ಶಿವಕುಮಾರ ಸ್ವಾಮೀಜಿಯವರು, ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನಿಸಿದ ಪುಣ್ಯಕ್ಷೇತ್ರಗಳು ಈ ಪವಿತ್ರವಾದ ಮಾಗಡಿ ಕ್ಷೇತ್ರದಲ್ಲಿವೆ. ಒಂದು ಕಾಲದಲ್ಲಿ ಈ ಕ್ಷೇತ್ರದ ತಿಪ್ಪಗೊಂಡನಹಳ್ಳಿ ಕೆರೆಯಿಂದ ಇಡೀ ಬೆಂಗಳೂರಿಗೆ ಕುಡಿಯುವ ನೀರು ನೀಡಲಾಗುತ್ತಿತ್ತು ಎಂದರು.

ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಇವರುಗಳು ಅಧಿಕಾರದಲ್ಲಿದ್ದಾಗ ಜನರ ಹೊಟ್ಟೆ ತುಂಬಿಸುವ ಜನಪರವಾದ ಒಂದೇ ಒಂದು ಕೆಲಸ ಮಾಡಿದ್ದರೆ ತಿಳಿಸಲಿ. ಉಳುವವನೆ ಭೂಮಿ ಒಡೆಯ, ಪಿಂಚಣಿ, ಆಶಾ, ಪಡಿತರ ವ್ಯವಸ್ಥೆ, ಅಂಗನವಾಡಿ ಕಾರ್ಯಕ್ರಮ ಸೇರಿದಂತೆ ನೂರಾರು ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಜಾತಿ ಮಾಡಿದವರಲ್ಲ ನೀತಿ ಮಾಡಿದವರು ಎಂದರು.

ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಪಕ್ಷದವರು ಪ್ರಚೋದನಾ ಭಾಷಣ ಮಾಡಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಧರ್ಮಸ್ಥಳ ವಿಚಾರವಾಗಿ ಭಾವನಾತ್ಮಕ ವಿಚಾರಗಳನ್ನು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಪ್ಪಟ ಹಿಂದೂ. ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಅಭಿಮಾನ ಬೆಳೆಸಿಕೊಂಡಿದ್ದಾರೆ. ನಮ್ಮ ತಂದೆ ಗುಂಡೂರಾವ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಲು ಮಾಗಡಿ ಜನ್ಮಭೂಮಿ. ಅದರಿಂದಲೇ ನನಗೆ ಮಾಗಡಿ ಎಂದರೆ ವಿಶೇಷ ಪ್ರೀತಿ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ವಿರೋಧಿಗಳ ಟೀಕೆಗೆ ಅಭಿವೃದ್ಧಿ ಮೂಲಕವೇ ಉತ್ತರ ಕೊಡಲಾಗುತ್ತದೆ 103 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಡಿಕೆ ಸಹೋದರರೇ ಕಾರಣ. ನೀರಾವರಿ ಇಲಾಖೆಗೆ ನೂರಾರು ಕೋಟಿ ಅನುದಾನ ನೀಡಲಾಗಿದೆ. ಚೆಕ್ ಡ್ಯಾಮ್ ನಿರ್ಮಾಣಕ್ಕೆ 250 ಕೋಟಿ ಅನುದಾನ, ಹೇಮಾವತಿ ಶ್ರೀರಂಗ ಏತ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ಚಾಲನೆ ಕೊಡಬೇಕಾಗಿತ್ತು. ಎಕ್ಸ್‌ಪ್ರೆಸ್ ಕೆನಾಲ್ ವಿವಾದದಿಂದ ಕಾರ್ಯಕ್ರಮವನ್ನು ಎರಡು ತಿಂಗಳು ಮುಂದೂಡಲಾಗಿದೆ ಎಂದರು.

ಇದೇ ವೇಳೆ ಕರೋನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ವಿಎಸ್ಎಸ್ಎನ್ ಅಧ್ಯಕ್ಷರು, ಪುರಸಭಾ ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರಿಗೆ ಹಾಗೂ ತಾಲೂಕು ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಬೆಳ್ಳಿ ಗದೆ ಹಾಗೂ ಬೆಳ್ಳಿ ಕೆಂಪೇಗೌಡ ಪ್ರತಿಮೆ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಬಾಲಕೃಷ್ಣ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಎಂಎಲ್‌ಸಿ ಎಸ್.ರವಿ, ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್, ಉಪಾಧ್ಯಕ್ಷ ಕೆಇಬಿ ರಾಜಣ್ಣ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಕೆ.ರಾಜು, ಪುರಸಭಾಧ್ಯಕ್ಷೆ ರಮ್ಯಾನರಸಿಂಹಮೂರ್ತಿ, ಮಾಗಡಿ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಮಾಜಿ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಮುಖಂಡರಾದ ಬಿ.ಎಸ್. ಕುಮಾರ್, ಕಲ್ಕೆರೆ ಶಿವಣ್ಣ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್ ಭಾಗವಹಿಸಿದ್ದರು.

ಬಾಕ್ಸ್‌...............

ಅಶೋಕ್ ಗೆ ಬುದ್ದಿಭ್ರಮಣೆ: ಡಿಸಿಎಂ ಡಿಕೆಶಿ

ಮಾಗಡಿಯಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳ ಆಸ್ತಿ ಒಡೆಯಲು ಸರ್ಕಾರ ಮುಂದಾಗಿದೆ ಎನ್ನುವ ಆರ್.ಅಶೋಕ್ ಆರೋಪದ ಬಗ್ಗೆ ಕೇಳಿದಾಗ, “ವಿಪಕ್ಷ ನಾಯಕ ಆರ್.ಅಶೋಕ್ ಗೆ ಬುದ್ದಿ ಭ್ರಮಣೆಯಾಗಿದೆ. ಧರ್ಮಸ್ಥಳ ಆಸ್ತಿ ಒಡೆಯುವುದು ಅವರ ಪಕ್ಷದ ಆಂತರಿಕ ರಾಜಕಾರಣ. ಇದು ಅವರ ಪಕ್ಷದ ಆಂತರಿಕ ವಿಚಾರ ಎಂದು ಉತ್ತರಿಸಿದರು.

(ಈ ಕೋಟ್‌ ಅನ್ನು ಪ್ಯಾನಲ್‌ನಲ್ಲಿ ಬಳಸಿ)

ಡಿ.ಕೆ.ಶಿವಕುಮಾರ್ ತಮ್ಮ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತಿದ್ದು, ಮಾಗಡಿ ತಾಲೂಕಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯಾದ ಮೇಲೆ ಬಿಎಂಟಿಸಿ ಬಸ್ 20 ಕಿಲೋಮೀಟರ್ ವ್ಯಾಪ್ತಿಯಿಂದ 40 ಕಿಲೋಮೀಟರ್‌ವರೆಗೂ ವಿಸ್ತರಿಸಿದ್ದು ಬಿಎಂಟಿಸಿ ಬಸ್‌ಗಳು ಮಾಗಡಿಗೂ ಬರಲಿದ್ದು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಕುದೂರು ಡಿಪೋ ಮತ್ತು ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡುತ್ತೇವೆ.

-ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ