ಸಾರಾಂಶ
ದೇವದುರ್ಗ: ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ನೀರು ಹರಿಸಲು ಸಲಹಾ ಸಮಿತಿ ಸಭೆ ಆಯೋಜಿಸಲಾಗಿದ್ದು, ರೈತರ ಹಿತಾಸಕ್ತಿ ಆಧರಿಸಿ ಸಭೆಯ ನಿರ್ಣಯಗಳು ಇರಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ ಒತ್ತಾಯಿಸಿದರು.ಪಟ್ಟಣದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಮರ್ಪಕ ಲಭ್ಯತೆ ಇದೆ. ಇತ್ತೀಚಿಗೆ ಕೈಗೊಂಡಿರುವ ಕಾಲುವೆಗಳ ಪುನರ್ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟ ಹಾಗೂ ಅಪೂರ್ಣ ಕಾಮಗಾರಿಗಳಾಗಿರುವ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ಸಮರ್ಪಕ ವಾಗಿ ನೀರು ಹರಿಯುತ್ತಿಲ್ಲ. ಟೇಲೆಂಡ್ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವೇ ಇಲದಂತಾಗಿದೆ. ಕಾಲುವೆಗಳಲ್ಲಿ ಗೇಟ್ ನಿರ್ವಹಣಾ ವ್ಯವಸ್ಥೆ , ಸಿಬ್ಬಂದಿ ಸೇವಾ ವ್ಯವಸ್ಥೆ ವಿಫಲಗೊಂಡಿದೆ.ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆ ಆಧರಿಸಿ, 7 ದಿನಗಳ ಕಾಲ ಬಂದ್ ಮಾಡುವುದು ಮತ್ತು 14 ದಿನಗಳವರೆಗೆ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಹನುಮಂತ ಗುರಿಕಾರ, ಮೌನೇಶ ದಾಸರ್, ಶಬ್ಬೀರ ಜಾಲಹಳ್ಳಿ, ರಂಗನಾಥ ಬುಂಕಲದೊಡ್ಡಿ, ರಮೇಶ ಇದ್ದರು.ಅಧಿಕಾರಿಗಳು ಗೊಂದಲದ ತೀರ್ಮಾನ ಕೈಗೊಳ್ಳಬಾರದುದೇವದುರ್ಗ : ನಾರಾಯಣಪೂರ ಬಲದಂಡೆ ನಾಲೆಯಿಂದ ಕಾಲುವೆಗಳಿಗೆ ನೀರು ಹರಿಸುವಲ್ಲಿ ಮುಖ್ಯ ಇಂಜಿನೀಯರ್ ನೀಡಿರುವ ಆದೇಶ ಗೊಂದಲಮಯವಾಗಿದ್ದು, ರೈತರಿಗೆ ತೊಂದರೆ ನೀಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ ಒತ್ತಾಯಿಸಿದರು.ಕೆಬಿಜೆಎನ್ಎಲ್ ಮುಖ್ಯ ಇಂಜಿನೀಯರ್ ನೀರು ಹರಿಸುವ ಆದೇಶದಿಂದ ರೈತರು ಗೊಂದಲಕ್ಕೀಡಾಗಿದ್ದಾರೆ ಹೀಗಾಗಿ ಕಾಲುವೆ ನೀರು ವ್ಯರ್ಥವಾಗಿ ಹಳ್ಳಗಳ ಮುಖಾಂತರ ನದಿಗೆ ಸೇರುತ್ತಿವೆ. ಇತ್ತೀಚೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನೀರಾವರಿ ಜಂಟಿ ಸಲಹಾ ಸಮಿತಿ ಸಭೆ ಜರುಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಕಾರಣ ಮುಂಗಾರು ಬೆಳೆಗೆ ಮತ್ತು ಟೆಲೆಂಡ್ ಜಮೀನುಗಳಿಗೆ ನೀರಿನ ಲಭ್ಯತೆ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.