ಜಲಜೀವನ್ ಮಿಷನ್ ವತಿಯಿಂದ ನೀರು ಪೂರೈಸುವ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಗಿದ್ದು, ಸಾವಿರಾರು ಲೀಟರ್ ಶುದ್ಧ ನೀರು ರಸ್ತೆ ಪಾಲಾಗುತ್ತಿದೆ. ಒಂದು ಕಡೆ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡುತ್ತಿದ್ದರೆ, ಮತ್ತೊಂದೆಡೆ ಅಮೂಲ್ಯವಾದ ನೀರು ಚರಂಡಿ ಸೇರುತ್ತಿರುವುದು ಸ್ಥಳೀಯ ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ಪೈಪ್ ಒಡೆದಿರುವುದರಿಂದ ಸುತ್ತಮುತ್ತಲಿನ ಬಡಾವಣೆಗಳ ಪ್ರದೇಶಗಳಲ್ಲಿ ಅಗತ್ಯದಷ್ಟು ನೀರು ಸರಬರಾಜು ಆಗದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೊಳೆನರಸೀಪುರ: ಪಟ್ಟಣದ ಪುರಸಭೆ ಕಚೇರಿ ಸಮೀಪವಿರುವ ಮಹಾತ್ಮಗಾಂಧಿ ವೃತ್ತದ ಪಕ್ಕದಲ್ಲಿ ಸಾಗಿರುವ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಒಡೆದು ಎರಡು ತಿಂಗಳಿಂದ ಸಾವಿರಾರು ಲೀಟರ್ ನೀರು ನಿರಂತರವಾಗಿ ಪೋಲಾಗುತ್ತಿದ್ದರೂ ಅಗತ್ಯ ಕ್ರಮಕೈಗೊಳ್ಳದ ಕಾರಣದಿಂದ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
ಪಟ್ಟಣದ ಮಹಾತ್ಮಗಾಂಧಿ ವೃತ್ತದ ರಸ್ತೆಯ ಪಕ್ಕದಲ್ಲಿ ಹಾದುಹೋಗಿರುವ ಜಲಜೀವನ್ ಮಿಷನ್ ವತಿಯಿಂದ ನೀರು ಪೂರೈಸುವ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಗಿದ್ದು, ಸಾವಿರಾರು ಲೀಟರ್ ಶುದ್ಧ ನೀರು ರಸ್ತೆ ಪಾಲಾಗುತ್ತಿದೆ. ಒಂದು ಕಡೆ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡುತ್ತಿದ್ದರೆ, ಮತ್ತೊಂದೆಡೆ ಅಮೂಲ್ಯವಾದ ನೀರು ಚರಂಡಿ ಸೇರುತ್ತಿರುವುದು ಸ್ಥಳೀಯ ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ಪೈಪ್ ಒಡೆದಿರುವುದರಿಂದ ಸುತ್ತಮುತ್ತಲಿನ ಬಡಾವಣೆಗಳ ಪ್ರದೇಶಗಳಲ್ಲಿ ಅಗತ್ಯದಷ್ಟು ನೀರು ಸರಬರಾಜು ಆಗದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಪುರಸಭೆ ವಾಣಿಜ್ಯ ಸಂಕೀರ್ಣದ ವರ್ತಕರು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಜಲ ಜೀವನ್ ಮಿಷನ್ ಅವರಿಗೆ ಸೇರಿರುವ ನೀರಿನ ಪೈಪ್‌ಲೈನನ್ನು ಅವರೇ ಸಿದ್ಧ ಪಡಿಸಬೇಕು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಮುಂಗಾರುಮಳೆಯಾಗದೇ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇಂತಹ ಸಮಯದಲ್ಲಿ ಅಮೂಲ್ಯವಾದ ನೀರು ವ್ಯರ್ಥವಾಗುತ್ತಿದೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು, ಪೋಲಾಗುತ್ತಿರುವ ನೀರು ನಿಲ್ಲಿಸುವ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜಲ ಜೀವನ್ ಮಿಷನ್ ಯೋಜನೆಯ ಎಇಇ ಉಮೇಶ್ ಅವರನ್ನು ಇದರ ಸಂಬಂಧ ಸಂಪರ್ಕಿಸಲು ಯತ್ನಿಸಿದಾಗ ಫೋನ್ ಕರೆ ಸ್ವೀಕರಿಸಲಿಲ್ಲ.