ಛಾಯಾ ಭಗವತಿ ದೇಗುಲಕ್ಕೆ ಜಲದಿಗ್ಬಂಧನ: ಮೆಟ್ಟಿಲಲ್ಲೇ ಪೂಜೆ

| Published : Aug 23 2025, 02:00 AM IST

ಛಾಯಾ ಭಗವತಿ ದೇಗುಲಕ್ಕೆ ಜಲದಿಗ್ಬಂಧನ: ಮೆಟ್ಟಿಲಲ್ಲೇ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

Waterlogging at Chhaya Bhagavathi temple: Worship on the steps

- ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಹೊರಹರಿವು

- ಕೃಷ್ಣಾ ನದಿಪಾತ್ರದಲ್ಲಿ ಮುಂದುವರೆದ ಪ್ರವಾಹ ಪರಿಸ್ಥಿತಿ

ಕನ್ನಡಪ್ರಭ ವಾರ್ತೆ ಕೊಡೇಕಲ್‌ (ಯಾದಗಿರಿ ಜಿಲ್ಲೆ)

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮಹಾರಾಷ್ಟ್ರದ ಕೋಯ್ನಾ ಡ್ಯಾನಿಂದ 93 ಸಾವಿರ ಕ್ಯೂಸೆಕ್, ರಾಧಾನಗರಿ ಡ್ಯಾಂನಿಂದ 7 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡುತ್ತಿರುವುದರಿಂದ, ರಾಜ್ಯದ ಆಲಮಟ್ಟಿ ಆಣೆಕಟ್ಟು ಹಾಗೂ ಬಸವಸಾಗರ ಆಣೆಕಟ್ಟುಗಳಿಗೆ ನಿರಂತರ ನೀರಿನ ಒಳಹರಿವು ಹರಿದು ಬರುತ್ತಿದೆ.

ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 2.60 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಕಳೆದ 3 ದಿನಗಳಿಂದ ಇಷ್ಟೇ ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮುಂದುವರೆದಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಆಲಮಟ್ಟಿ ಲಾಲ್‌ ಬಹಾದ್ದೂರ್‌ ಜಲಾಶಯಕ್ಕೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿದ್ದು, ಗರಿಷ್ಠ ನೀರಿನ ಮಟ್ಟ ಕಾಯ್ದುಕೊಂಡು ಲಾಲ್‌ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಇಲ್ಲಿನ ನೀರಿನ ಮಟ್ಟ ಕಾಯ್ದಿಟ್ಟುಕೊಂಡು ಜಲಾಶಯದ ಎಲ್ಲ 30 ಕ್ರಸ್ಟ್ಗೇಟಗಳ ಮೂಲಕ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ನದಿ ತೀರದ ಗ್ರಾಮಗಳಾದ ನಾರಾಯಣಪುರ, ಜಂಗಿನಗಡ್ಡಿ, ಮೇಲಿನಗಡ್ಡಿ, ಗೆದ್ದಲಮರಿ, ಜುಮಾಲಪೂರ ಗ್ರಾಮಗಳಲ್ಲಿ ಕಂದಾಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ಒಂದು ವೇಳೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸಿ ಪ್ರವಾಹ ಎದುರಿಸುವ ಸಂದರ್ಭ ಬಂದರೆ ತಾಲೂಕು ಆಡಳಿತ ಪ್ರವಾಹ ಎದುರಿಸಲು ಸನ್ನದ್ಧವಾಗಿದೆ ಎಂದು ಹುಣಸಗಿ ತಹಸೀಲ್ದಾರ ಎಂ. ಬಸವರಾಜ ಅವರು ತಿಳಿಸಿದ್ದಾರೆ.

....ಬಾಕ್ಸ್‌......

- ಛಾಯಾ ಭಗವತೀಗೆ ಜಲದಿಗ್ಬಂಧನ

ಕೃಷ್ಣಾ ನದಿಯ ತಟದಲ್ಲಿರುವ, ಪುರಾಣ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನದ ಮುಂಭಾಗದ ಮಂಟಪದವರೆಗೆ ನೀರು ಬಂದಿದ್ದು, ಛಾಯಾದೇವಿಗೆ ಜಲದಿಗ್ಬಂಧನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪುರೋಹಿತರು ದೇವಿಯ ಉತ್ಸವ ಮೂರ್ತಿಯೊಂದಿಗೆ ಮೆಟ್ಟಿಲ ಮೇಲೆ ಪೂಜೆ ಸಲ್ಲಿಸುತ್ತಿದ್ದು ಭಕ್ತರು ಸಹ ಅಲ್ಲಿಯೇ ದರ್ಶನ ಪಡೆದು ಭೋರ್ಗರೆಯುವ ಕೃಷ್ಣಾ ನದಿಯನ್ನು ನೋಡಿ ಆನಂದಿಸುತ್ತಾ ಫೋಟೋ ಹಾಗೂ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 490.42 ಮೀ. ತಲುಪಿದ್ದು 25.58 (ಶೇ76.79) ಟಿಎಂಸಿ ನೀರಿನ ಸಂಗ್ರಹವಿದೆ, ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.

-

22ವೈಡಿಆರ್‌2 : ಕೊಡೇಕಲ್ ಸಮೀಪದ ಛಾಯಾಭಗವತಿ ದೇವಸ್ಥಾನದ ಗರ್ಭಗುಡಿಗೆ ಕೃಷ್ಣೆ ಪ್ರವೇಶಿಸಿರುವುದರಿಂದ ದೇವಸ್ಥಾನದ ಮೆಟ್ಟಿಲ ಮೇಲೆ ಪೂಜೆ ಸಲ್ಲಿಸುತ್ತಿರುವ ಅರ್ಚಕರಾದ ಚಿದಂಭರ ಭಟ್ಟ ಜೋಶಿ. (ಚಿತ್ರ : ಮಂಜುನಾಥ್‌ ಬಿರಾದರ್, ಸಗರ.)

-

22ವೈಡಿಆರ್3 : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಶುಕ್ರವಾರ 2.60 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಯಿತು. (ಚಿತ್ರ : ಮಂಜುನಾಥ್‌ ಬಿರಾದರ್, ಸಗರ.)

-

22ವೈಡಿಆರ್‌4 : ಕೃಷ್ಣಾ ನದಿಗೆ ಪ್ರವಾಹ ಉಂಟಾಗಿರುವ ಹಿನ್ನಲೆಯಲ್ಲಿ, ಕೊಡೇಕಲ್‌ ಸಮೀಪದ ಛಾಯಾದೇವಿ ದೇವಸ್ಥಾನದ ಮುಂಭಾಗದ ಮಂಟಪದವರೆಗೆ ಬಂದಿರುವ ನೀರು. (ಚಿತ್ರ : ಮಂಜುನಾಥ್‌ ಬಿರಾದರ್, ಸಗರ.)