ಸಾರಾಂಶ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಹಿಡಕಲ್ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 21 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಬಿಡುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊರವಲಯದ ನದಿತಟದಲ್ಲಿರುವ ಹೊಳೆಬಸವೇಶ್ವರ ದೇಗುಲ ಜಲಾವೃತಗೊಂಡಿದೆ.
ಕನ್ನಡಪ್ರಭ ವಾರ್ತೆ ಮುಧೋಳ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಹಿಡಕಲ್ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 21 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಬಿಡುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊರವಲಯದ ನದಿತಟದಲ್ಲಿರುವ ಹೊಳೆಬಸವೇಶ್ವರ ದೇಗುಲ ಜಲಾವೃತಗೊಂಡಿದೆ. ದೇಗುಲದೊಳಗೆ ಸುಮಾರು ಐದು ಅಡಿಯಷ್ಟು ನೀರು ನುಗ್ಗಿರುವುದರಿಂದ ಶ್ರಾವಣ ಮಾಸದ ಪೂಜೆಗೆ ಅಡ್ಡಿಯಾಗಿದೆ. ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ನದಿ ದಂಡೆಯ ಮೇಲೆ ಮೂರ್ತಿಗಳನ್ನು ಇಟ್ಟು ಪೂಜಾ ಕಾರ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ.ಶ್ರಾವಣ ಮಾಸದ ಕಾರಣ ದೇವರ ದರ್ಶನಕ್ಕೆ ಬಂದಿರುವ ಭಕ್ತರಿಗೆ ನಿರಾಸೆ ಉಂಟಾಗಿದೆ. ಭಕ್ತರು ನದಿ ದಂಡೆಯಲ್ಲಿ ಇಟ್ಟಿರುವ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನದಿ ತುಂಬಿ ಹರಿಯುತ್ತಿರುವುದರಿಂದ ದೇಗುಲಕ್ಕೆ ಬರುತ್ತಿರುವ ಭಕ್ತರು ಗಂಗಾಪೂಜೆ ಮಾತ್ರ ನೆರವೇರಿಸುತ್ತಿದ್ದಾರೆ. ದೇಗುಲಕ್ಕೆ ಹೋಗುವ ರಸ್ತೆಯ ಮೇಲೆ ಸುಮಾರು ಐದು ಅಡಿಯಷ್ಟು ನೀರು ಬಂದಿದ್ದು, ಮಕ್ಕಳು ನದಿಯಲ್ಲಿ ಈಜುತ್ತ ಮೋಜು ಮಾಡುತ್ತಿರುವುದು ಕಂಡುಬಂತು.ಇದೆ ವೇಳೆ ಜರ್ಮನಿಯಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಮನೆ ದೇವರಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದರು. ಆದರೆ ನೀರು ಬಂದಿರುವುದರಿಂದ ನಿರಾಸೆಗೊಂಡರು. ಮನೆ ದೇವರು ಆಗಿರುವುದರಿಂದ ಶ್ರಾವಣ ಮಾಸದಲ್ಲಿ ಪ್ರತಿವರ್ಷ ದೇವಸ್ಥಾನಕ್ಕೆ ಆಗಮಿಸುತ್ತೇವೆ. ದೇವಸ್ಥಾನಕ್ಕೆ ನೀರು ಆವರಿಸಿರುವುದರಿಂದ ದೇಗುಲ ಪ್ರವೇಶ ಬಂದ್ ಮಾಡಿರುವುದರಿಂದ ಮೂಲ ದೇವರ ದರ್ಶನ ಸಿಗದಿರುವುದು ನಿರಾಸೆ ಮೂಡಿಸಿದೆ. ನದಿ ದಂಡೆಯಲ್ಲಿಟ್ಟಿರುವ ಮೂರ್ತಿಗೆ ಪೂಜೆ ಸಲ್ಲಿಸಿದ್ದೇವೆ. ನದಿ ತುಂಬಿ ಹರಿಯುತ್ತಿರುವುದು ಒಂದು ಕಡೆ ಖುಷಿ ಆಗಿದ್ದರೆ ಪ್ರವಾಹದ ಆತಂಕವೂ ಇಂದೆ ಎಂದು ಅಶ್ವಿನಿ ಪ್ರತಿಕ್ರಿಯಿಸಿದರು.