ವಾಟರ್‌ಮ್ಯಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

| Published : Feb 18 2025, 12:34 AM IST

ಸಾರಾಂಶ

ತಾಳ್ಕರೆ ಗ್ರಾಮ ಪಂಚಾಯಿತಿಯ ಪಿಡಿಒ ಅವರ ಸೂಚನೆಯ ಮೇರೆಗೆ ಅಲ್ಲಿಯ ವಾಟರ್ ಮ್ಯಾನ್ ಶಬ್ಬೀರ್ ಸಾಬ್ ಅನಧಿಕೃತವಾಗಿದ್ದ ನಲ್ಲಿಗಳ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ನಿಯೋಜನೆಗೊಂಡಿರುವ ವಾಟರ್ ಮ್ಯಾನ್ ಮೇಲೆ ಗಾಮದ ನಾಲ್ವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಡಿ.ಕಲ್ಕೆರೆಯಲ್ಲಿ ಜಲ ಜೀವನ್ ಯೋಜನೆ ಜಾರಿಯಾಗಿದೆ. ಹಲವಾರು ಮಂದಿ ಮನೆಗಳಿಗೆ ಹಾಕಿರುವ ನಲ್ಲಿಗಳನ್ನು ಮುರಿದು ತಮ್ಮ ಮನೆಯಲ್ಲಿರುವ ಸಂಪ್‌ಗಳಿಗೆ ಹೆಚ್ಚು ನೀರು ಬರುವಂತೆ ಮಾಡಿಕೊಂಡಿದ್ದಾರೆ. ಇದರಿಂದ ಮುಂದಿನ ಮನೆಗಳಿಗೆ ನೀರು ಬರುತ್ತಿಲ್ಲ ಎಂಬ ದೂರಿನ ಮೇರೆಗೆ ತಾಳ್ಕರೆ ಗ್ರಾಮ ಪಂಚಾಯಿತಿಯ ಪಿಡಿಒ ಅವರ ಸೂಚನೆಯ ಮೇರೆಗೆ ಅಲ್ಲಿಯ ವಾಟರ್ ಮ್ಯಾನ್ ಶಬ್ಬೀರ್ ಸಾಬ್ ಅನಧಿಕೃತವಾಗಿದ್ದ ನಲ್ಲಿಗಳ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಇದರಿಂದ ದೊಚ್ಚಿಗೆದ್ದ ಅದೇ ಗ್ರಾಮದ ಮಹಮದ್ ಗೌಸ್ ಸಾಬ್, ಮಹಮದ್ ಇಲಿಯಾಜ್, ಮಹಮದ್ ಇಬ್ರಾಹಿಂ, ಇರ್ಷಾದ್ ರವರು ವಾಟರ್ ಮ್ಯಾನ್ ಶಬ್ಬೀರ್ ಸಾಬ್ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆಂದು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.ಕಲ್ಕೆರೆಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಶಬ್ಬೀರ್ ಸಾಬ್ ಮೇಲೆ ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಚಾಕುವಿನಿಂದ ಹಲ್ಲೆ ಮಾಡುವ ಸಂಧರ್ಭದಲ್ಲಿ ವಾಟರ್ ಮ್ಯಾನ್ ಶಬ್ಬೀರ್ ರವರ ಎರಡೂ ಕೈಗಳಿಗೆ ಗಾಯವಾಗಿದೆ. ದೊಣ್ಣೆಯಿಂದ ಬೆನ್ನಿಗೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಗಾಜಿನ ಬಾಗಿಲು ಛಿದ್ರಗೊಂಡಿದೆ. ಪ್ರಾಣ ಬೆದರಿಕೆ:

ತನ್ನ ಮೇಲೆ ವೈಯಕ್ತಿಕವಾಗಿ ದ್ವೇಷ ಕಾರುತ್ತಿರುವ ಇವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಎರಡು ಮೂರು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ. ಇವರು ಯಾವುದೇ ಕ್ಷಣ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿ ಜೀವಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಶಬ್ಬೀರ್ ಮತ್ತು ಆತನ ಪತ್ನಿ ಜರೀನಾ ಬಾನು ದಂಡಿನಶಿವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಸದ್ಯ ವಾಟರ್ ಮ್ಯಾನ್ ಶಬ್ಬೀರ್ ತುರುವೇಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಕೆ.ವಿ.ಮೂರ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

೧೭ ಟಿವಿಕೆ ೨ – ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಕಲ್ಕೆರೆಯ ವಾಟರ್ ಮ್ಯಾನ್ ಶಬ್ಬೀರ್ ಸಾಬ್