ಸಾರಾಂಶ
ಡಿ.ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ಹಾರೋಹಳ್ಳಿತಾಲೂಕಿನಲ್ಲಿ ಇತ್ತೀಚೆಗೆ ಬಿಸಿಲು 25ರಿಂದ 30 ಡಿಗ್ರಿಯಷ್ಟು ತಲುಪಿರುವ ಕಾರಣ ಬಿಸಿಲಿನ ಧಗೆಗೆ ಜನರು ತಮ್ಮ ದೇಹದ ದಣಿವಾರಿಸಿಕೊಳ್ಳಲು ಕಲ್ಲಂಗಡಿ, ಮಜ್ಜಿಗೆ, ಎಳನೀರಿನ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಎಳನೀರು ದೇಹಕ್ಕೆ ತಂಪು ಮಾಡಲು ಹಾಗೂ ಔಷಧೀಯ ಗುಣವಿರುವ ಕಾರಣ ಎಳೆನೀರು ಕುಡಿಯುವುದು ವಾಡಿಕೆಯಾಗಿದೆ. ಬೇಸಿಗೆಯ ದಣಿವಾರಿಸಲು ಹಲವು ಸಂದರ್ಭದಲ್ಲಿ ವಿವಿಧ ಬಗೆಯ ಪಾನಿಯಗಳು ಸೇವಿಸುತ್ತಾರೆ, ಬೇಸಿಗೆ ಸಂದರ್ಭದಲ್ಲಿ ಮಾತ್ರ ಎಳನೀರು ಬೇಡಿಕೆ ಹೆಚ್ಚಾಗಿ ಮಾಲೀಕರು ಬೆಲೆ ಏರಿಕೆ ಮಾಡುತ್ತಾರೆ. ಎಳನೀರಿನ ಬೆಲೆ 35ರಿಂದ 40 ರು.ಗಳಾದರೆ, ಕಲ್ಲಂಗಡಿ ಹಣ್ಣಿನ ಒಂದು ಸಣ್ಣ ಪೀಸು 20 ರುಪಾಯಿಗೆ ನಿಗದಿ ಮಾಡಲಾಗಿದೆ. ಕಲ್ಲಂಗಡಿ ಹಣ್ಣು ಹಾಗೂ ಎಳನೀರು ಮಾರುವ ವ್ಯಾಪಾರಿಗಳಿಗೆ ಸ್ವಲ್ಪ ಲಾಭ ಸಿಗುತ್ತದೆ ಮತ್ತು ವ್ಯಾಪಾರಿಗಳಿಗೆ ಖುಷಿ ಕೂಡ ಆಗುತ್ತದೆ. ಬೇಸಿಗೆಯ ಧಗೆ ಆರಿದರೆ ಸಾಕು ಎಂಬಂತೆ ಮೈಮನ ತಂಪಾಗಲು ಕಾತರಿಸುವ ಸಮಯವಿದು. ಈ ಬೇಸಿಗೆಯನ್ನು ಎದುರಿಸುವುದಾದರೂ ಹೇಗೆ? ಹಾಗಂತ ಕಂಡಕಂಡಿದ್ದನ್ನು ಕುಡಿದು ದಾಹ ತೀರಿದರೆ ಸಾಕು ಎನ್ನುವ ಹಪಾಹಪಿಗೆ ಇಳಿದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ದರಿಂದ ಆರೋಗ್ಯಯುತ ಪಾನೀಯಗಳನ್ನೇ ಹೆಚ್ಚು ಸೇವಿಸಬೇಕೆಂದು ಬಯಸುತ್ತಿದ್ದಾರೆ. ಈ ಮೂಲಕ ಪುನಶ್ಚೇತನ ಪಡೆದು ತಾಪದ ದಿನಗಳಿಗೆ ಕಳೆಯಬಹುದು. ಬಿಸಿಲು ಏರಿಕೆಯಾದಷ್ಟೂ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತವೆ. ಈ ವರ್ಷ ಬಿಸಿಲಿನ ಧಗೆ ಹೆಚ್ಚಿರುವ ಕಾರಣಕ್ಕೆ ಕಾಯಿಲೆಗಳ ಪ್ರಮಾಣವೂ ಹೆಚ್ಚಿದೆ. ಬೇಸಿಗೆಯಲ್ಲಿ ಕಾಣಿಸುವ ಸಾಮಾನ್ಯ ಕಾಯಿಲೆಗಳನ್ನು ಅಸಡ್ಡೆ ಮಾಡಬಾರದು. ಇದರಿಂದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಬೇಸಿಗೆಯೆಂದರೆ ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಕೂಡ ಕಿರಿಕಿರಿ ಈ ಸಮಯದಲ್ಲಿ ಮಕ್ಕಳಿಗೆ ನೀಡುವ ಆಹಾರ, ಉಡುಪು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಗಾದ್ರೆ ಬೇಸಿಗೆಯ ಋತುವಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಈ ಸಲಹೆಗಳನ್ನು ಪಾಲಿಸಬೇಕು.ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಹೀಗಾಗಿ ಮಕ್ಕಳಲ್ಲಿ ಯಾವುದೇ ಸಣ್ಣ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡು ಬಂದರೂ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ. ಬೇಸಿಗೆ ಸಂದರ್ಭದಲ್ಲಿ ದೇಹ ಹೆಚ್ಚಿನ ದ್ರವ ಬಯಸುತ್ತದೆ. ವೈದ್ಯರು ಕೂಡ ಬೇಸಿಗೆ ಕಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ಜನರಿಗೆ ದೇಹಕ್ಕೆ ಬೇಕಾದ ದ್ರವರೂಪದ ಪದಾರ್ಥಗಳನ್ನು ಹಾಗೂ ಹಣ್ಣಿನ ರಸವನ್ನು ಸೇವಿಸಲು ಹೇಳುತ್ತಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಕೊಂಡುಕೊಳ್ಳುವಲ್ಲಿ ಮುಂದಾಗಿರುವ ವ್ಯಾಪಾರಸ್ಥರಲ್ಲಿ ಉತ್ಸಾಹವಿದೆ.