ಮೈಸೂರು ಮೃಗಾಲಯ ಈಗ ತಂಪು ತಂಪು...!

| Published : Mar 12 2025, 12:51 AM IST

ಸಾರಾಂಶ

ಬೇಸಿಗೆಯ ವೇಳೆ ಪ್ರಾಣಿಗಳ ದೇಹ ತಂಪಾಗಿಸಲು ಗೊರಿಲ್ಲಾ, ಚಿಂಪಾಜಿ, ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಬ್ಲಾಗ್, ಎಳನೀರು, ಹಣ್ಣುಗಳನ್ನು ನೀಡಲಾಗುತ್ತಿದೆ.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಬೇಸಿಗೆ ಆರಂಭದಲ್ಲೇ ಸುಡು ಬಿಸಿಲು ಹೆಚ್ಚಾಗಿದ್ದು, ಇದರಿಂದ ಮೈಸೂರಿನ‌ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಬೇಸಿಗೆಯ ಬಿಸಿ ತಟ್ಟಿದೆ. ಹೀಗಾಗಿ, ಪ್ರಾಣಿ ಪಕ್ಷಿಗಳಿಗೆ ತಂಪಾದ ವಾತಾವರಣ ಒದಗಿಸಲು ಜೆಟ್ ಸ್ಪ್ರಿಂಕ್ಲರ್ ಗಳ ಮೂಲಕ ನೀರು ಸಿಂಪರಣೆ ಆರಂಭಿಸಲಾಗಿದೆ.

ಮೃಗಾಲಯದಲ್ಲಿರುವ ಹುಲಿ, ಸಿಂಹ, ಕರಡಿ, ಆನೆ, ಗೊರಿಲ್ಲಾ ಮೈ ಮೇಲೆ ಹಾಗೂ ಪ್ರಾಣಿಗಳ ಮನೆಗಳ ಮೇಲೆ ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮೃಗಾಲಯದ ಆವರಣದಲ್ಲಿ 45 ಕಡೆ ಸ್ಪ್ರಿಂಕ್ಲರ್ ಅಳವಡಿಸಲಾಗಿದ್ದು, 50 ರಿಂದ 100 ಮೀಟರ್ ಗಳಷ್ಟು ದೂರಕ್ಕೆ ನೀರು ಚಿಮ್ಮುತ್ತದೆ. ಈ ವೇಳೆ ಪ್ರಾಣಿಗಳು ನೀರಿಗೆ ಮೈಯೊಡ್ಡಿ ನಿಂತು ದೇಹ ತಂಪಾಗಿಸಿಕೊಳ್ಳುತ್ತಿವೆ.

ಬೇಸಿಗೆಯ ವೇಳೆ ಪ್ರಾಣಿಗಳ ದೇಹ ತಂಪಾಗಿಸಲು ಗೊರಿಲ್ಲಾ, ಚಿಂಪಾಜಿ, ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಬ್ಲಾಗ್, ಎಳನೀರು, ಹಣ್ಣುಗಳನ್ನು ನೀಡಲಾಗುತ್ತಿದೆ. ಪ್ರಾಣಿಗಳಿಗೆ ಅಲ್ಲಲ್ಲಿ ನೆರಳಿನ ವ್ಯವಸ್ಥೆ, ಮರಗಿಡಗಳ ಕೆಳಗೆ ನೆರಳಿನ‌ ಆಶ್ರಯ ಪಡೆಯುವ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸುವ ಕಾರ್ಯದಲ್ಲಿ ಮೃಗಾಲಯದ ಸಿಬ್ಬಂದಿ ತೊಡಗಿಕೊಂಡಿದ್ದಾರೆ.

ತಂಪಾದ ಆಹಾರ ಕ್ರಮವನ್ನು ಖಾತ್ರಿ ಪಡಿಸಲು ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ 2 ಬಾರಿ ತಾಜಾ ಎಳನೀರು, ನೀರಿನಾಂಶವುಳ್ಳ ತರಕಾರಿ, ಕಲ್ಲಂಗಡಿ, ಸೌತೆಕಾಯಿ, ಕರಬೂಜ ಇತ್ಯಾದಿಗಳನ್ನು ನೀಡಲಾಗುತ್ತಿದೆ ಹಾಗೂ ಓ.ಆರ್.ಎಸ್. ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ.

ಜಿಂಕೆ, ಕಡವೆಗಳಿಗೆ ಅಲ್ಲಲ್ಲಿ ನೀರಿನ‌ಕೊಳ, ಕೆಸರಿನ ಕೊಳಗಳ ನಿರ್ಮಿಸಲಾಗಿದೆ. ನೆರಳಿನ ಆಶ್ರಯಕ್ಕೆ ಶೆಡ್ ನಿರ್ಮಾಣ ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ಬೇಸಿಗೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.

ಉಷ್ಣ ಮಾಪಕ ಅಳವಡಿಕೆ

ಪ್ರತಿ ಪ್ರಾಣಿ ಮನೆಗಳಲ್ಲಿರುವ ಉಷ್ಣಾಂಶವನ್ನು ತಿಳಿದುಕೊಳ್ಳಲು ಉಷ್ಣ ಮಾಪಕಗಳನ್ನು ಅಳವಡಿಸಲಾಗಿದೆ. ಉಷ್ಣ ಮಾಪಕಗಳು ಏರುತ್ತಿರುವ ತಾಪಮಾನದಿಂದ ಮೃಗಾಲಯದೊಳಗಿರುವ ಎಲ್ಲಾ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿ ರಕ್ಷಿಸಲು ಹಾಗೂ ಅವುಗಳನ್ನು ಕ್ಷೇಮವಾಗಿರಿಸಲು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.

----

ಕೋಟ್...

ಬೇಸಿಗೆ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ತೊಂದರೆ ಆಗದಂತೆ ಜೆಟ್ ಗಳು, ಸ್ಪ್ರಿಂಕ್ಲರ್ ಗಳ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದೇವೆ. ಈಗಾಗಲೇ ಆ ಕೆಲಸ ಆರಂಭವಾಗಿದೆ. ಗೋರಿಲ್ಲಾ, ಚಿಂಪಾಜಿ, ಕೋತಿಗಳಿಗೆ ಫ್ಯಾನ್, ಏರ್ ಕೂಲರ್ ಗಳ ಅಳವಡಿಕೆ ಜೊತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತಹ ತಂಪಾದ ಹಣ್ಣುಗಳನ್ನು ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ.

- ರಂಗಸ್ವಾಮಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

----

ಬಾಕ್ಸ್...

ಹಕ್ಕಿ ಜ್ವರದ ಭೀತಿ- ಮೃಗಾಲಯದಲ್ಲಿ ಕಟ್ಟೆಚ್ಚರ

ಹಕ್ಕಿ ಜ್ವರದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ‌ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ಮೃಗಾಲಯದಲ್ಲಿರುವ ಪ್ರಾಣಿಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಿರುವ ಸಿಬ್ಬಂದಿ, ಪ್ರಾಣಿ ಪಕ್ಷಿಗಳ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದು, ಅದರಲ್ಲಿ ಕಾಲನ್ನು ಅದ್ದಿದ ನಂತರ ಜನರು ಬರಬೇಕು. ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು.

ಪಕ್ಷಿಗಳ ಇಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಿ ಕೊಡಲಾಗಿದೆ. ನಮ್ಮಲ್ಲಿ ಹಕ್ಕಿ ಜ್ವರದಂತಹ ಪ್ರಕರಣಗಳು ಇಲ್ಲಿಯವರೆಗೂ ಕಂಡು ಬಂದಿಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನು ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.